ಬೈಲೂರ ಗ್ರಾಪಂ ಮನರೇಗಾ ಜಾಬ್ ಕಾರ್ಡ್ ಅಕ್ರಮ; ಕಂಪ್ಯೂಟರ್ ಆಪರೇಟರ್ ಪತ್ನಿಯ ಹೆಸರು ಸೇರ್ಪಡೆ?

WhatsApp
Telegram
Facebook
Twitter
LinkedIn

ಖಾನಾಪುರ: ತಾಲೂಕಿನ ಬೈಲೂರ ಗ್ರಾಮ ಪಂಚಾಯಿತಿಯ ಮನರೇಗಾ ಜಾಬ್ ಕಾರ್ಡ ಪಟ್ಟಿಯಲ್ಲಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸದವರ ಹೆಸರು ಇರುವುದು ಕಂಡು ಬಂದಿದೆ.

ವಿಚಿತ್ರವೆಂದರೆ ಬೈಲೂರ ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಆಗಿರುವ ನೀಲೇಶ್ ಮಾದರ ಎಂಬುವರ ಹೆಂಡತಿಯ ಹೆಸರು ಜಾಬ್ ಕಾರ್ಡ್ ಪಟ್ಟಿಯಲ್ಲಿ ಇರುವುದು ಹಲವಾರು ಶಂಕೆಗಳಿಗೆ ಕಾರಣವಾಗಿದೆ. ಅಶ್ವಿನಿ ನೀಲೇಶ್ ಮಾದರ ಬೈಲೂರ ಗ್ರಾಪಂ ವ್ಯಾಪ್ತಿಯ ನಿವಾಸಿಯೇ ಅಲ್ಲ ಎನ್ನುವುದು ಸಹ ಬೆಳಕಿಗೆ ಬಂದಿದೆ.

ಯಾವುದೇ ಗ್ರಾಪಂ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡಬೇಕಾದರೆ ಅವರು ಆ ಗ್ರಾಪಂ ನಿವಾಸಿಯಾಗಿರುವುದು ಕಡ್ಡಾಯವಾಗಿದೆ. ಆದರೆ ಬೈಲೂರ ಗ್ರಾಪಂ ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಗುಂಜಿ ಗ್ರಾಪಂ ವ್ಯಾಪ್ತಿಯ ಸಿಂಪೇವಾಡಿ ನಿವಾಸಿಯಾಗಿರುವ ಅಶ್ವಿನಿ ಅವರ ಹೆಸರು ಬೈಲೂರ ಗ್ರಾಪಂ ಜಾಬ್ ಕಾರ್ಡ್ ಪಟ್ಟಿಯಲ್ಲಿ ಸೇರಿಕೊಂಡಿರುವುದರ ಹಿಂದೆ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ವಿಷಯದ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರು ತಾಪಂ ಹಾಗೂ ಜಿಪಂ ಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ಕ್ರಮಕ್ಕೆ ಮುಂದಾದ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ತಾಲೂಕಾ ಪಂಚಾಯಿತಿಗೆ ಸೂಚಿಸಿದ್ದರು. ಅದರಂತೆ ತಾಲೂಕಾ ಪಂಚಾಯತ್ ನ ಮನರೇಗಾ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಬೈಲೂರ ಗ್ರಾಪಂನಲ್ಲಿ ತನಿಖೆ ನಡೆಸಲಾಗಿದೆ. ಬೈಲೂರ ಗ್ರಾಪಂ ಕಂಪ್ಯೂಟರ್ ಆಪರೇಟರ್ ನಿಲೇಶ್ ಈತನ ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳು ಆತನ ಹಾಗೂ ಆತನ ಹೆಂಡತಿಯ ಬ್ಯಾಂಕ್ ಪಾಸ್ ಬುಕ್ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಇಲ್ಲಸಲ್ಲದ ನೆಪ ಹೇಳುತ್ತಿರುವ ನೀಲೇಶ ವೃಥಾ ಕಾಲಹರಣ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ತನಿಖೆ ನಡೆದಿದೆ: ಅಧಿಕಾರಿ ರೂಪಾಲಿ ಬಡಕುಂದ್ರಿ

ಪ್ರಕರಣದ ಬಗ್ಗೆ ಪ್ರಜಾ ನೆರಳು ಪತ್ರಿಕೆಯೊಂದಿಗೆ ಮಾತನಾಡಿದ ಮನರೇಗಾ ವಿಭಾಗದ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ನೀಲೇಶ್ ಅವರನ್ನು ವಿಚಾರಣೆ ನಡೆಸಿದ್ದು, ಅವರ ಹಾಗೂ ಅವರ ಹಾಗೂ ಪತ್ನಿಯ ಬ್ಯಾಂಕ್ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸ್ವತಃ ನೀಲೇಶ್ ಕೂಡ ಬೈಲೂರ ಗ್ರಾಪಂ ನಿವಾಸಿಯಲ್ಲ!

ಬೈಲೂರ ಗ್ರಾಪಂ ಕಂಪ್ಯೂಟರ್ ಆಪರೇಟರ್ ನೀಲೇಶ್ ಮಾದರ ಕೂಡ ಈ ಗ್ರಾಪಂ ವ್ಯಾಪ್ತಿಯ ನಿವಾಸಿಯಲ್ಲ. ಈತ ಪತ್ನಿಯೊಂದಿಗೆ ಗುಂಜಿ ಗ್ರಾಪಂ ವ್ಯಾಪ್ತಿಯ ಸಿಂಪೇವಾಡಿ ಗ್ರಾಮದಲ್ಲಿ ವಾಸಿಸುತ್ತಾನೆ. ನಿಯಮಗಳ ಪ್ರಕಾರ ಆಯಾ ಗ್ರಾಪಂ ವ್ಯಾಪ್ತಿಯ ನಿವಾಸಿಯೇ ಕಂಪ್ಯೂಟರ್ ಆಪರೇಟರ್ ಆಗಿ ನೇಮಕವಾಗಬಹುದು. ಹಾಗಿದ್ದರೂ ಈತ ಬೈಲೂರ ಗ್ರಾಪಂ ನಲ್ಲಿ ನೌಕರಿ ಮಾಡುತ್ತಿರುವುದಾದರೂ ಹೇಗೆ ಎಂದು ಅಧಿಕಾರಿಗಳು ಉತ್ತರಿಸಬೇಕಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon