ಬೆಂಗಳೂರು: ಮಗಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿ ತಾನೂ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ತಾರುಣ್ಯ (13) ಹಾಗೂ ಸುವರ್ಣ (45) ಸಾವನ್ನಪ್ಪಿದ ತಾಯಿ-ಮಗಳಾಗಿದ್ದಾರೆ. ಘಟನೆ ಸಂಬಂಧ ಪತಿ ಚಂದ್ರಶೇಖರ್ ಎನ್ನುವವರು ನೀಡಿದ ದೂರಿನ ಮೇರೆಗೆ ಪ್ರತ್ಯೇಕವಾಗಿ ಅಸಹಜ ಸಾವು (ಯುಡಿಆರ್ ) ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇಮ್ಮಡಿಹಳ್ಳಿಯಲ್ಲಿ ವಾಸವಾಗಿದ್ದ ಚಂದ್ರಶೇಖರ್- ಸುವರ್ಣ ದಂಪತಿಗೆ ಇಬ್ಬರ ಮಕ್ಕಳಿದ್ದಾರೆ. ಹಿರಿಯ ಪುತ್ರ ಎಸ್.ಎಸ್.ಎಲ್.ಸಿ ಓದುತ್ತಿದ್ದು, ಹಾಸ್ಟೆಲ್ ನಲ್ಲಿ ಇದ್ದಾನೆ, ಮಗಳು 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮನೆಯಲ್ಲಿದ್ದಳು. ಚಂದ್ರಶೇಖರ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋಗಿ ನಂತರ ಪತ್ನಿಗೆ ಪೋನ್ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದಿರುವುದಕ್ಕೆ ಅನುಮಾನಗೊಂಡು ಸಹೋದರ ವಿನೋದ್ ಕುಮಾರ್ ಗೆ ಮಾಹಿತಿ ನೀಡಿ ಮನೆಗೆ ಹೋಗಿ ಬರುವಂತೆ ಸೂಚಿಸಿದ್ದರು. ಅಲ್ಲಿಗೆ ಹೋದಾಗ ಯಾರೂ ಬಾಗಿಲು ತೆರೆಯದಿದ್ದಾಗ ಅದನ್ನು ಒಡೆದು ಒಳಹೋದಾಗ ದುರಂತ ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ಆಧರಿಸಿ ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮನೆಯ ಕೊಠಡಿಯ ಮಂಚದ ಮೇಲೆ ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾದರೆ, ತಾಯಿಯ ಮೃತದೇಹ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರೂಮಿನಲ್ಲಿ ಎಲ್ಲಿ ಪರಿಶೀಲಿಸಿದರೂ ಡೆತ್ ನೋಟ್ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆ ವೇಳೆ ಸುವರ್ಣ ಖಿನ್ನತೆಯಿಂದ ಬಳಲುತ್ತಿದ್ದರು. ಪತಿ ಕೆಲ ವರ್ಷಗಳಿಂದ ಹಾರ್ಟ್ ಸರ್ಜರಿಯಾಗಿದ್ದು, ದೈನಂದಿನ ಬದುಕಿಗೆ ಪತಿ ಸಂಪಾದನೆ ಸಾಕಾಗುತ್ತಿರಲಿಲ್ಲ ಎಂದು ಮುಂದಿನ ಭವಿಷ್ಯದ ಬಗ್ಗೆ ಚಿಂತಿತಳಾಗಿ ಖಿನ್ನತೆ ಜಾರಿದಿದ್ದಳು. ಇದೇ ಆಂತಕದಿಂದ ಪುತ್ರಿಯನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.














