ಬೆಂಗಳೂರು: ರಾಜ್ಯ ಸರ್ಕಾರದ ಕಠಿಣ ನಿಯಮಾವಳಿಗಳಿಂದ ಕರ್ನಾಟಕದ 25 ಸಾವಿರಕ್ಕೂ ಹೆಚ್ಚು ಸ್ವತಂತ್ರ ಪ್ರೀ-ಸ್ಕೂಲ್ಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಇದರಿಂದ ಸುಮಾರು 4.5 ಲಕ್ಷ ಮಹಿಳಾ ಶಿಕ್ಷಕರು, ಆಯಾಗಳು ಹಾಗೂ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ ಎಂದು ಕರ್ನಾಟಕ ಪ್ರೀ-ಸ್ಕೂಲ್ಸ್ ಕೌನ್ಸಿಲ್ (ಕೆಸಿಪಿಎಸ್) ಆತಂಕ ವ್ಯಕ್ತಪಡಿಸಿದೆ.
ಪ್ರೀ-ಸ್ಕೂಲ್ಗಳಿಗೂ ದೊಡ್ಡ ಶಾಲೆಗಳಿಗೆ ಅನ್ವಯಿಸುವ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಬಾಡಿಗೆ ಕಟ್ಟಡಗಳಿಗೆ 30 ವರ್ಷಗಳ ನೋಂದಾಯಿತ ಗುತ್ತಿಗೆ ಒಪ್ಪಂದ, 18*20 ಅಡಿ ತರಗತಿ ಕೊಠಡಿ, 2,000 ಚದರ ಅಡಿ ಜಾಗ ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆ ಕಡ್ಡಾಯಗೊಳಿಸಿರುವುದು ಸಣ್ಣ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿದೆ.
ಇದಲ್ಲದೆ, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಬೇಕಾದ ಶಾಲಾ ನೋಂದಣಿ ಆನ್ಲೈನ್ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಆಡಳಿತಾತ್ಮಕ ತೊಂದರೆಗಳು ಎದುರಾಗುತ್ತಿವೆ. ಸ್ವತಂತ್ರ ಪ್ರೀ-ಸ್ಕೂಲ್ಗಳು ಮುಚ್ಚಿದರೆ ಸ್ಥಳೀಯವಾಗಿ ಕಡಿಮೆ ವೆಚ್ಚದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ ಪಡೆಯುವ ಅವಕಾಶ ಕಡಿಮೆಯಾಗಲಿದೆ. ಇದರಿಂದ ಉದ್ಯೋಗಸ್ಥ ತಾಯಂದಿರು ಕೆಲಸ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ದೊಡ್ಡ ಶಾಲಾ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿ ಶುಲ್ಕ ಐದು ಪಟ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಕೌನ್ಸಿಲ್ ಆತಂಕ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರೀ-ಸ್ಕೂಲ್ಗಳಿಗೆ ಅನ್ವಯಿಸುವಂತೆ ಸರಳ ನಿಯಮಾವಳಿ ರೂಪಿಸಲು ಉನ್ನತ ಮಟ್ಟದ ಸಮಿತಿ ರಚಿಸಬೇಕು. ಕಟ್ಟಡ, ಗುತ್ತಿಗೆ ಒಪ್ಪಂದ ಮತ್ತು ಭೂ ಪರಿವರ್ತನೆಗೆ ಸಂಬಂಧಿಸಿದ ಕಠಿಣ ನಿಯಮಗಳ ಜಾರಿಗೆ ತಾತ್ಕಾಲಿಕ ತಡೆ ನೀಡಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೋಂದಣಿ ಪೋರ್ಟಲ್ ಅನ್ನು ತಕ್ಷಣ ಸರಿಪಡಿಸಬೇಕು ಎಂದು ಶಿಕ್ಷಣ ಸಚಿವರು ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.













