ಬೆಂಗಳೂರು: ಪ್ರತಿಯೊಬ್ಬರೂ ಶ್ರೀಮದ್ಭಗವದ್ಗಿತಾ ಸಾರ ಗೀತಾ ಕಥನಗಳನ್ನು ಓದಿ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಅದ್ವೈತ ವಾಚಸ್ಪತಿ ಡಾ.ಪಾವಗಡ ಪ್ರಕಾಶ್ ರಾವ್ ಕರೆ ನೀಡಿದರು.
ಎನ್. ಆರ್.ಕಾಲೋನಿ ಶ್ರೀ ರಾಮಮಂದಿರ ಟ್ರಸ್ಟ್ ವತಿಯಿಂದ ಅವರ ಮದ್ಬಗವದ್ಗೀತಾ ಜ್ಞಾನ ಸತ್ರ 18 ದಿನಗಳ ಗೀತಾ ಭಾಷ್ಯ ಉಪನ್ಯಾಸ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಪ್ರಾರಂಭಿಕ ಉಪನ್ಯಾಸವನ್ನು ಅವರು ನೀಡಿದರು. ಭಗವದ್ಗೀತೆ ಎಂಬುದು ಯೋಗಾಭ್ಯಾಸವಿದ್ದಂತೆ ಅದರ ಅಧ್ಯಯನ ಮಾಡುವ ಮೂಲಕ ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು, 18 ದಿನಗಳ ಕಾಲ ನಡೆಯುವ ಉಪನ್ಯಾಸದಲ್ಲಿ ಅಚಾರ್ಯತ್ರಯ ಭಗವದ್ಗೀತೆಯ ಭಾಷ್ಯದ ಗೂಡಾರ್ಥಗಳನ್ನು ಬಿಡಿಸಿ ಹೇಳುವ ಮೂಲಕ ಪ್ರೇಕ್ಷಕರಿಗೆ ಅರ್ಥಮಾಡಿಸಲಾಗುವುದು ಎಂದರು.
ಭಗವದ್ಗೀತೆಯು ಯಾವುದೇ ಒಂದು ಧರ್ಮ, ಜಾತಿ ಅಥವಾ ವರ್ಗಕ್ಕೆ ಸೀಮಿತವಾದ ಗ್ರಂಥವಲ್ಲ, ಅದು ಸಮಗ್ರ ಮಾನವಕುಲಕ್ಕೆ ಮಾರ್ಗದರ್ಶನ ನೀಡುವ ಸಾರ್ವಕಾಲಿಕ ಸತ್ಯವಾಗಿದೆ. ಭಾರತೀಯ ಸಂಸ್ಕೃತಿಯ ಹೆಗ್ಗುರುತಾಗಿರುವ ಭಗವದ್ಗೀತೆಯನ್ನು ದೇಶ-ವಿದೇಶಗಳ ವಿದ್ವಾಂಸರು ಹಾಗೂ ಮಹಾನ್ ವ್ಯಕ್ತಿಗಳು ಅತ್ಯಂತ ಗೌರವದಿಂದ ಸ್ಮರಿಸುತ್ತಾರೆ. ಪ್ರಪಂಚದ ಯಾವ ಧರ್ಮಗ್ರಂಥಗಳಲ್ಲೂ ಕಾಣಸಿಗದಂತಹ ಅಧ್ಯಾತ್ಮಿಕ ಆಳ ಹಾಗೂ ಜೀವನ ಮೌಲ್ಯಗಳು ಗೀತೆಯಲ್ಲಿ ಅಡಗಿವೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತ ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಬೇರೆ ಮನರಂಜನಾ ವಿಚಾರಗಳಿಗೆ ಅವಕಾಶ ನೀಡದಂತೆ ಭಗವದ್ಗೀತೆಯಂತಹ ಮಹತ್ವದ ಗ್ರಂಥಗಳಿಗೆ ಸೂಕ್ತ ಸ್ಥಾನಮಾನ ನೀಡಿ ಅದರ ಅಧ್ಯಯನ ನಡೆಸಿ ತಮ್ಮ ಜೀವನವನ್ನು ಪವನಗೊಳಿಸಿಕೊಳ್ಳಬೇಕು ಎಂದರು.
ಆಚಾರ್ಯ ಶಂಕರರ ಭಗವದ್ಗೀತಾ ಭಾಷ್ಯ, ಲೋಕಮಾನ್ಯ ತಿಲಕರ ಗೀತಾ ರಹಸ್ಯ, ಮಹಾತ್ಮ ಗಾಂಧೀಜಿಯವರ ಅನಾಸಕ್ತಿ ಯೋಗ, ವಿನೋಬಾ ಭಾವೆಯವರ ಗೀತಾ ಪ್ರವಚನ ಹಾಗೂ ಡಿ.ವಿ.ಜಿ.ಯವರ ಜೀವನ ಧರ್ಮ ಯೋಗದಲ್ಲಿ ಗೀತೆಯ ಬಗ್ಗೆ ವಿಸ್ತೃತವಾದ ವ್ಯಾಖ್ಯಾನಗಳನ್ನು ನೀಡಲಾಗಿದೆ. ಕರ್ನಾಟಕದಲ್ಲೂ ಅನೇಕ ವಿದ್ವಾಂಸರು ಭಗವದ್ಗೀತೆಯ ಮೇಲೆ ಅನುವಾದಗಳು, ವ್ಯಾಖ್ಯಾನಗಳು ಮತ್ತು ಟೀಕೆಗಳನ್ನು ರಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಎನ್.ಆರ್.ಕಾಲೋನಿ ಶ್ರೀ ರಾಮ ಮಂದಿರ ಟ್ರಸ್ಟ್ ನ ಅಧ್ಯಕ್ಷ ಆದಿತ್ಯ ಪ್ರಕಾಶ್ ಮಾಧ್ಯಮಗಳ ಜೊತೆ ಮಾತನಾಡಿ, ಶ್ರೀ ರಾಮಮಂದಿರಮ್ ಟ್ರಸ್ಟ್ ನಿಂದ ಪ್ರಥಮ ಹಂತದ 18ದಿನಗಳ ಗೀತಾ ಭಾಷ್ಯ ಪ್ರವಚನ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ನಡೆಯಲಿದೆ. ಆರು ಹಂತಗಳ ಗೀತಾ ಜ್ಞಾನಪತ್ರ ಪ್ರತಿ 6 ತಿಂಗಳಿಗೊಮ್ಮೆ ಹಂತ ಹಂತವಾಗಿ ನಡೆಯಲಿದೆ. ಮೊದಲ ಚರಣ 22ರಿಂದ ನವಂಬರ್ 26ರವರೆಗೆ ಸಂಜೆ 6:30 ರಿಂದ 7:45ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘನಾಥ್ ಚ.ಹ, ಟ್ರಸ್ಟ್ ನ ನಿರ್ವಾಹಕ ಟ್ರಸ್ಟಿ ಎಸ್.ಎನ್.ಉಮಾಶಂಕರ್, ಖಚಾಂಚಿ ಎ.ನಾಗೇಂದ್ರ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














