ಹಳೆಯ ಬಟ್ಟೆ ಮರುಬಳಸಿ ಗೋವಾದ ನೈಸರ್ಗಿಕ ಪರಿಸರ ಬಿಂಬಿಸುವ ಚಿತ್ರಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಹಳೆಯ ಬಟ್ಟೆಗಳು ಹಾಗೂ ಮರುಬಳಕೆ ಮಾಡಿದ ಡೆನಿಮ್ ಗಳ ಕಲಾತ್ಮಕ ಎಂಬ್ರಾಯ್ಡರಿಯ ಮೂಲಕ ಗೋವಾದ ನೈಸರ್ಗಿಕ ಪರಿಸರವನ್ನು ಬಿಂಬಿಸುವ ಕಲಾಕೃತಿಗಳು, ಚಿತ್ರಪಟಗಳು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸಲಾಗುತ್ತಿದ್ದು, ಇವುಗಳು ನಗರದ ಜನತೆಯ ಮನಸೂರೆಗೊಂಡಿವೆ.

ಯಾವುದೇ ಹೊಸ ವಸ್ತುಗಳನ್ನು ಖರೀದಿಸದೆ, ತಮ್ಮ ಮಕ್ಕಳು ಹಾಗೂ ಪರಿಚಿತರಿಂದ ಪಡೆದ ಹಳೆಯ ಡೆನಿಮ್ ಜೀನ್ಸ್ ಮತ್ತು ಖಾದಿ ಬಟ್ಟೆಗಳನ್ನು ಬಳಸಿಕೊಂಡು ಕಲಾಕೃತಿಗಳು, ಚಿತ್ರಪಟಗಳನ್ನು ಸೃಜಿಸುವ ರೂವಾರಿ ಮುಂಬೈ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಸಾವಿಯಾ ವಿಯಾಗಸ್ ಆಗಿದ್ದಾರೆ. ಲೇಖಕಿಯೂ ಆಗಿರುವ ಇವರು ತಮ್ಮ ಬರವಣಿಗೆಯ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಗೋವಾದ ನೈಜ ಜೀವನ ಶೈಲಿ, ಸಂಸ್ಕೃತಿ, ಮತ್ತು ದೃಶ್ಯಾವಳಿಗಳನ್ನು ಕಸೂತಿ ಕಲೆಗಳ ಮೂಲಕ ಅಭಿವ್ಯಕ್ತಿಗೊಳಿಸುತ್ತಿದ್ದಾರೆ.

ಈ ವಿಶೇಷ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಖ್ಯಾತ ಚಿತ್ರಕಲಾವಿದ, ಶಿಲ್ಪಿ ಹಾಗೂ ಲೇಖಕರಾದ ಎಂ.ಎಸ್ ಮೂರ್ತಿ ಅವರು ಮಾತನಾಡಿ, ಇಲ್ಲಿರುವ ಪ್ರತಿಯೊಂದು ಚಿತ್ರಗಳೂ ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತವೆ. ಇವುಗಳನ್ನು ಕೇವಲ ಪ್ರತ್ಯೇಕ ಕಲಾಕೃತಿಗಳಾಗಿ ನೋಡದೆ, ಗೋವಾದ ಜೀವನ, ಅಲ್ಲಿನ ಜನರ ಕಥೆ ಮತ್ತು ಸಂಸ್ಕೃತಿಯನ್ನು ಹೆಣೆದಿರುವ ಒಂದೇ ಸಮಗ್ರ ಕಾವ್ಯಾತ್ಮಕ ಕಥೆಯಾಗಿ ಕಾಣಬಹುದಾಗಿದೆ ಎಂದು ಬಣ್ಣಿಸಿದರು.

ಚಿತ್ರಗಳಲ್ಲಿ ವ್ಯಕ್ತವಾಗಿರುವ ಕಾವ್ಯಾತ್ಮಕ ಹರಿವು ವೀಕ್ಷಕರ ಮನಸ್ಸನ್ನು ನೇರವಾಗಿ ತಲುಪಲಿದೆ. ಗೋವಾದ ಸೌಂದರ್ಯ, ಭಾವನಾತ್ಮಕತೆ ಮತ್ತು ಕಟು ಸತ್ಯಗಳನ್ನು ಒಳಗೊಂಡ ಕಥೆಗಳನ್ನು ಇಲ್ಲಿರುವ ಕಲಾಕೃತಿಗಳು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶನದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಾವಿಯಾ ವಿಯಾಗಸ್, ಬಾಲಿವುಡ್ ಚಿತ್ರಗಳಲ್ಲಿ ಬಿಂಬಿತವಾಗುವುದಕ್ಕಿಂತ ಭಿನ್ನವಾದ, ಜೀವಂತಿಕೆಯಿಂದ ಕೂಡಿದ ನೈಜ ಗೋವಾದ ಕಥೆಗಳನ್ನು ಜನರಿಗೆ ತಲುಪಿಸುವುದು ನನ್ನ ಕಲೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ಕಲಾಕೃತಿಗಳು ಪ್ರಸ್ತುತ ಮಾರಾಟಕ್ಕಿಲ್ಲ. ಲಾಭದ ಉದ್ದೇಶವಿಲ್ಲದೆ ಕೇವಲ ಕಲಾತ್ಮಕ ತೃಪ್ತಿ ಮತ್ತು ಕಥೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇನೆ ಎಂದರು.

ಈ ವಿಶೇಷ ಕಲಾ ಪ್ರಯತ್ನವನ್ನು ಆಧರಿಸಿ ಪ್ರಸ್ತುತ ಸಾಕ್ಷ್ಯಚಿತ್ರವನ್ನು ಸಹ ನಿರ್ಮಿಸಲಾಗುತ್ತಿದೆ. ಭವಿಷ್ಯದಲ್ಲಿ ಯಾವುದೇ ಸಂಗ್ರಹಾಲಯಗಳು ನನ್ನ ಪೂರ್ಣ ಕಲಾಕೃತಿಗಳ ಸಂಗ್ರಹವನ್ನು ಪಡೆದುಕೊಂಡು ಸಂರಕ್ಷಿಸಿದರೆ ಸಂತೋಷ ಪಡುತ್ತೇನೆ. ವಾಣಿಜ್ಯಿ ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡುವ ಯಾವುದೇ ಯೋಜನೆಯನ್ನು ನಾನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon