ಖಾನಾಪುರ: ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳಿಗೆ ಒಬ್ಬರೇ ಪಿಡಿಒ ಜವಾಬ್ದಾರಿ ವಹಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಒಬ್ಬ ಪಿಡಿಒಗೆ ಅನಿವಾರ್ಯ ಸಂದರ್ಭಗಳಲ್ಲಿ ಇತರ ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ವಹಿಸಲಾಗುತ್ತದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಕೂಡ ಇದು ಸತ್ಯವಾಗಿದೆ
ಆದರೆ, ಖಾನಾಪುರ ತಾಲೂಕಿನ ಅಮಟೆ, ಜಾಂಬೋಟಿ ಹಾಗೂ ಗೋಲಿಹಾಳಿ ಗ್ರಾಮ ಪಂಚಾಯಿತಿಗಳಿಗೆ ಒಬ್ಬರೇ ಪಿಡಿಒ ಇರುವುದು ಸಾಕಷ್ಟು ಅನುಮಾನ ಹಾಗೂ ಗೊಂದಲಗಳಿಗೆ ಕಾರಣವಾಗಿದೆ. ಶ್ರೀ ಆನಂದ ಬಿಂಗೆ ಇವರು ಅಧಿಕೃತ ಅಮಟೆ ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದು, ಸದ್ಯ ಜಾಂಬೋಟಿ ಹಾಗೂ ಗೋಲಿಹಾಳಿ ಗ್ರಾಪಂಗಳಿಗೂ ಇವರೇ ಪ್ರಭಾರಿ ಪಿಡಿಒ ಆಗಿದ್ದಾರೆ.
ಒಬ್ಬರೇ ಪಿಡಿಒ ಗೆ ಮೂರು ಗ್ರಾಪಂ ಗಳ ಜವಾಬ್ದಾರಿಗಳನ್ನು ಕೊಟ್ಟರೆ ಸುಗಮವಾಗಿ ಆಡಳಿತ ನಡೆಯುವುದು ಹೇಗೆ ಎಂಬುದು ಈ ಗ್ರಾಮಗಳ ಜನರ ಪ್ರಶ್ನೆಯಾಗಿದೆ. ಶ್ರೀ ಬಿಂಗೆ ಅತ್ಯಂತ ದಕ್ಷ ಅಧಿಕಾರಿ ಆಗಿರುವುದರಿಂದ ಇವರಿಗೆ ಮೂರು ಗ್ರಾಪಂಗಳ ಜವಾಬ್ದಾರಿ ಕೊಟ್ಟಿರಬಹುದು ಎಂದು ಜನ ವ್ಯಂಗ್ಯವಾಡುತ್ತಿದ್ದಾರೆ. ಜೊತೆಗೆ ಹೀಗೆ ಮೂರು ಗ್ರಾಪಂಗಳ ಉಸ್ತುವಾರಿಯ ಹಿಂದೆ ಬೇರೆನಾದರೂ ರಹಸ್ಯ ಅಡಗಿದೆಯಾ ಅಥವಾ ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡಿವೆಯಾ ಎಂಬ ಸಂಶಯಗಳು ಮೂಡುತ್ತಿವೆ. ಅಲ್ಲದೆ ಇವರಿಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷ ಇದೆಯಾ ಎಂದು ಪ್ರಶ್ನಿಸುವಂತಾಗಿದೆ. ಜಿಲ್ಲೆಯ ಪಿಡಿಒಗಳು ನನ್ನ ನೆಂಟರೇನಲ್ಲ ಎನ್ನುವ ಹಿರಿಯ ಅಧಿಕಾರಿಯು ಈ ಬಗ್ಗೆ ಉತ್ತರಿಸಬೇಕಿದೆ.
ಜಾಂಬೋಟಿಯಲ್ಲಿ ನಿರ್ಮಾಣವಾಗಿರುವ ಲೇಔಟ್ ಒಂದರ ವಿಷಯದಲ್ಲಿ ಸದರಿ ಆನಂದ ಬಿಂಗೆಯವರ ಕಾರ್ಯವೈಖರಿ ಪ್ರಶ್ನಿಸುವಂತಿದೆ. ಈ ಲೇಔಟ್ ವಿಷಯದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸದೆ ಅನುಮತಿ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇದರ ಕುರಿತಾದ ಕೆಲ ಮಹತ್ವದ ದಾಖಲೆಗಳು ಪ್ರಜಾನೆರಳು ಪತ್ರಿಕೆಗೆ ಲಭ್ಯವಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಪಿಡಿಒಗಳ ಕೊರತೆ ಇದ್ದರೂ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಕೆಲ ಪಿಡಿಒ ಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಹುಶಃ ಜಿಲ್ಲೆಯಲ್ಲಿ ಪಿಡಿಒಗಳ ಕೊರತೆ ಕಾಡಲು ಇದೂ ಒಂದು ಕಾರಣವಾಗಿದೆ. ಮಾನ್ಯ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತಾರೆ ಎಂಬುದು ಜನರ ಆಶಯವಾಗಿದೆ.














