ಬೆಂಗಳೂರು: ಕರ್ನಾಟಕ ಕಂದಾಯ ಇಲಾಖೆಯಲ್ಲಿ ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಯಾವುದೇ ವಿಳಂಬವಿಲ್ಲದೆ ಈಡೇರಿಸಬೇಕು ಎಂದು ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಪ್ರತಾಪ್ ಮದಕರಿ ಆಗ್ರಹಿಸಿದರು.
ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಂತೆ, ಗ್ರಾಮ ಸಹಾಯಕರ ಸೇವೆಯನ್ನು ಗ್ರೂಪ್ ಡಿ ದರ್ಜೆಗೆ ಪರಿಗಣಿಸಬೇಕು. ಕನಿಷ್ಠ ವೇತನವನ್ನು ನಿಗದಿಪಡಿಸಬೇಕು. ನಿವೃತ್ತ / ಸೇವೆಯಲ್ಲೇ ಮೃತಪಟ್ಟ ಗ್ರಾಮ ಸಹಾಯಕರಿಗೆ 10 ಲಕ್ಷ ಇಡಿಗಂಟು ನೀಡುವ ನಿರ್ಧಾರವನ್ನು ತಕ್ಷಣ ಜಾರಿಗೆ ತರಬೇಕು ಎಂದು ಕೋರಿದರು.
ಗ್ರಾಮ ಸಹಾಯಕರ ಕುರಿತ ಅಗತ್ಯ ಸರ್ಕಾರಿ ಆದೇಶ ಇನ್ನೂ ಹೊರಬಂದಿಲ್ಲ. ಇದೇ ವರ್ಷದ ಫೆಬ್ರವರಿ 6 ರಂದು 5 ಲಕ್ಷ ಇಡಿಗಂಟು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದ್ದಾರೂ, ಇದುವರೆಗೆ ಯಾವುದೇ ಅರ್ಹ ನಿವೃತ್ತ /ಮೃತ ಗ್ರಾಮ ಸಹಾಯಕರಿಗೆ ಅಥವಾ ಅವರ ಕುಟುಂಬಕ್ಕೆ ಈ ಮೊತ್ತ ಪಾವತಿಯಾಗಿಲ್ಲ. ಅದ್ದರಿಂದ, ಸಭೆಯಲ್ಲಿ ಚರ್ಚಿಸಿದಂತೆ 10 ಲಕ್ಷ ಇಡಿಗಂಟು ನೀಡುವ ಕುರಿತು ಪುನರ್ಪರಿಶೀಲಿಸಿ ತಕ್ಷಣ ಸೂಕ್ತ ಆದೇಶ ಹೊರಡಿಸಬೇಕು. ಈಗಾಗಲೇ ಮಂಜೂರಾಗಿರುವ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ವಿತರಿಸಬೇಕು ಎಂದು ಮನವಿ ಮಾಡಿದರು.
ದಶಕಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಸೇವಾ ನಿಯಮಾವಳಿಗೊಳಪಡಿಸಿ ಗ್ರೂಪ್ ಡಿ ಹುದ್ದೆಗಳಿಗೆ ಪರಿಗಣಿಸಿ ಶಾಶ್ವತ ಸೇವಾ ಭದ್ರತೆ ನೀಡಬೇಕು. ಈ ವ್ಯವಸ್ಥೆ ಜಾರಿಯಾಗುವವರೆಗೆ ನಿವೃತ್ತರಾಗುವ ಗ್ರಾಮ ಸಹಾಯಕರಿಗೆ ಗೌರವಯುತ ನಿವೃತ್ತಿ, ಕುಟುಂಬ ಕಲ್ಯಾಣ/ ಆರ್ಥಿಕ ನೆರವು ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ರೂಪಿಸಬೇಕು. ಜೊತೆಗೆ, ಪ್ರಸ್ತುತ ಪರಿಷ್ಕೃತ ಕನಿಷ್ಠ ಮಾಸಿಕ ವೇತನವನ್ನು ಶೀಘ್ರದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹವನ್ನು ವ್ಯಕ್ತಪಡಿಸಿದರು.
ಸೇವೆಯಲ್ಲಿರುವಾಗ ಮೃತಪಟ್ಟ ಗ್ರಾಮ ಸಹಾಯಕರ ಅರ್ಹ ವಾರಸುದಾರರಿಗೆ ಅನುಕಂಪ ಆಧಾರಿತ ನೇಮಕಾತಿ, ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ನೆರವು ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮ ಸಹಾಯಕರ ವಾಸಸ್ಥಳದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸುವ ಪ್ರದೇಶದ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯಕ್ಕಾಗಿ ನಿವೇಶನ ಮಂಜೂರಾತಿ ಕಲ್ಪಿಸಬೇಕು ಎಂದರು
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಅಂದಿನ ಕಂದಾಯ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಗೆ ಸಂಬಂಧಿಸಿದ ಕಡತವನ್ನು ಸರ್ಕಾರ ಮರುಪರಿಶೀಲಿಸಿ, ಮಾರ್ಚ್ 2015 ರ ಅಡ್ವಕೇಟ್ ಜನರಲ್ ಅವರ ವರದಿಯ ಆಧಾರದ ಮೇಲೆ ಗ್ರಾಮ ಸಹಾಯಕರ ನ್ಯಾಯಯುತ ಬೇಡಿಕೆಗಳ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಹಾಗೂ ಸಂಬಂಧಪಟ್ಟ ವಿದ್ಯಾರ್ಹತೆ ಹೊಂದಿರುವ ಗ್ರಾಮ ಸಹಾಯಕರಿಗೆ ಇಲಾಖೆಯ ನೇಮಕಾತಿಯಲ್ಲಿ 30% ಮೀಸಲಾತಿ ಕಲ್ಪಿಸುವುದರೊಂದಿಗೆ, ಅವರ ದೀರ್ಘಕಾಲದ ಸೇವೆ ಮತ್ತು ಅನುಭವಕ್ಕೆ ಸೂಕ್ತ ಮಾನ್ಯತೆ ದೊರೆಯುವಂತೆ ನೇಮಕಾತಿ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಪ್ರತಾಪ್ ಮದಕರಿ ಆಗ್ರಹಿಸಿದರು.
ಸ್ಥಳಕ್ಕೆ ಸರ್ಕಾರದ ಪರವಾಗಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಆಗಮಿಸಿ ಗ್ರಾಮ ಸಹಾಯಕರ ಬೇಡಿಕೆಗಳನ್ನು ಸ್ವೀಕರಿಸಿದರು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಮಲ್ಲಪ್ಪ ಗೋಗಿ, ಸಿದ್ದಯ್ಯ, ಲಕ್ಷ್ಮೀನಾರಾಯಣ್, ಹೆಚ್. ಬಿ ತಳವಾರ, ಮೈಕಲ್ ಡಿಸೋಜ, ಶಿವಗಂಗಮ್ಮ ಸೇರಿದಂತೆ ನೂರಾರು ಗ್ರಾಮ ಸಹಾಯಕರು ಉಪಸ್ಥಿರಿದ್ದರು.














