ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ ವಾಸ್ತವದ ಅರಿವು ಮುಖ್ಯ: ರವಿ ಚನ್ನಣ್ಣನವರ್

WhatsApp
Telegram
Facebook
Twitter
LinkedIn

ಬೆಂಗಳೂರು: ವಿದ್ಯಾರ್ಥಿಗಳಿಗೆ ಸಾಧನೆಯ ಹಾದಿಯಲ್ಲಿ ವಾಸ್ತವದ ಅರಿವಿರಬೇಕು. ತಾವಿರುವ ಸ್ಥಿತಿಯಿಂದ ಮುಂದಿನ ಹಂತಕ್ಕೆ ತಲುಪಲು ಸೂಕ್ತ ಮಾರ್ಗದರ್ಶನದ ಪಡೆದು ಮುನ್ನಡೆಯಬೇಕು. ಯಾವುದೇ ಅರಿವಿಲ್ಲದೆ ಹೊಸ ರಂಗಕ್ಕೆ ಕಾಲಿಡುವ ಯುವಜನತೆ ಎಚ್ಚರದಿಂದ ಮುಂದಿನ ಹೆಜ್ಜೆ ಇಡಬೇಕು ಎಂದು ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಕಿವಿಮಾತು ಹೇಳಿದರು.

2026-27ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹೊಸ ದಿಗಂತ ಎಂಬ ಶೀರ್ಷಿಕೆಯಡಿ ವಿಶೇಷ ಒರಿಯಂಟೇಶನ್ ಕಾರ್ಯಕ್ರಮವನ್ನು ನೃಪತುಂಗ ರಸ್ತೆಯ ಅಂಬೇಡ್ಕರ್ ವೀದಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಷ್ಟೇ ತೊಂದರೆಗಳು, ಸವಾಲುಗಳು ಎದುರಾದರೂ ನನ್ನ ಗುರಿ ಮತ್ತು ಕನಸನ್ನು ತಲುಪುವ ತನಕ ನಾನು ವಿಚಲಿತನಾಗಲಿಲ್ಲ. ಕನಸನ್ನು ಕಂಡು ಅದನ್ನು ತಲುಪಿದ ನಂತರ ಕೂಡ ವಿರಮಿಸದೆ ನಿರತರ ಸಾಧನೆಗಳನ್ನು ಮಾಡುತ್ತಾ ಮುನ್ನಡೆದಿದ್ದೇನೆ. ಆದ್ದರಿಂದ ಉದ್ಯೋಗ ಅಥವಾ ಹುದ್ದೆಯನ್ನು ಪಡೆದ ನಂತರವೂ ಸಾಧನೆಯ ಪಯಣವನ್ನು ವಿದ್ಯಾರ್ಥಿಗಳು ಮುಂದುವರೆಸಬೇಕು ಎಂದು ಕರೆ ನೀಡಿದರು.

ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಗೊಂದಲದ ಸ್ಥಿತಿಯಲ್ಲಿರುವ ಯುವಕರಿಗೆ ಸರಿಯಾದ ದಾರಿ ತೋರಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನನ್ನ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ ಎಂದರು.

ಜೀವನದಲ್ಲಿ ಎಂದಿಗೂ ದಾರಿ ತಪ್ಪಬಾರದು. ಮುಂದಿನ 30 ವರ್ಷಗಳ ನಂತರ ನಾನು ಏನಾಗಬೇಕು ಅನ್ನುವುದಕ್ಕಿಂತ ಹೆಚ್ಚಾಗಿ, ನಾನು ಎಲ್ಲಿರಬೇಕು ಎನ್ನುವುದನ್ನು ಇಂದೇ ನಿರ್ಧರಿಸಬೇಕು. ಜೀವನಶೈಲಿಯನ್ನು ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಿ, ಧನಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಒಮ್ಮೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಸಾಧನೆಯ ಹಾದಿಯಲ್ಲಿ ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಓದು ಮತ್ತು ವಿದ್ಯೆ ಎಂಬುದು ಯಾರೂ ಕಸಿದುಕೊಳ್ಳಲಾಗದ ಬಹುದೊಡ್ಡ ಸಂಪತ್ತಾಗಿದೆ. ಶಿಕ್ಷಣ ವ್ಯಕ್ತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ, ಆದ್ದರಿಂದ ಓದನ್ನು ಎಂದಿಗೂ ನಿಲ್ಲಿಸಬಾರದು. ಇನ್ನು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಸದಾ ಬದ್ಧರಾಗಿರಬೇಕು. ತಂದೆ-ತಾಯಿಯ ತ್ಯಾಗವನ್ನು ನೆನಪಿನಲ್ಲಿಡಬೇಕು. ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಂಡು, ದೇಶಕ್ಕೆ ಹಾಗೂ ಸಮಾಜಕ್ಕೆ ಉಪಯುಕ್ತವಾಗುವಂತಹ ಸಾಧನೆಗಳನ್ನು ಮಾಡುವುದಕ್ಕೆ ವಿದ್ಯಾರ್ಥಿ ಸಮೂಹ ಮುಂದಾಗಬೇಕು ಎಂದು ರವಿ ಡಿ ಚನ್ನಣ್ಣನವರ್ ತಿಳಿಸಿದರು.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ, ಕಾರ್ಯಕ್ರಮದ ಸಂಯೋಜಕಿ ಡಾ. ವೀಣಾ ಅವರು ಮಾದ್ಯಮಗಳ ಜೊತೆ ಮಾತನಾಡಿ, ದ್ವಿತೀಯ ಪಿಯುಸಿ ಮುಗಿಸಿ ಹೊಸ ಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ನಗರದ ಕೇಂದ್ರ ಭಾಗದಲ್ಲಿರುವ ನಮ್ಮ ಕಾಲೇಜಿಗೆ ನೂರಾರು ಕನಸು ಮತ್ತು ಆಸೆಗಳೊಂದಿಗೆ ದಾಖಲಾತಿ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಈ ಹೊಸ ದಿಗಂತ ಕಾರ್ಯಕ್ರಮ ಅತ್ಯಂತ ಅವಶ್ಯಕವಾಗಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ . ಪದವಿ ಶಿಕ್ಷಣದ ಆರಂಭದಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಪರಿಕಲ್ಪನೆ ಇಲ್ಲದೆ ಬರುವ ವಿದ್ಯಾರ್ಥಿಗಳಿಗೆ ತಾವೇನು ಸಾಧಿಸಬೇಕು, ತಮ್ಮಲ್ಲಿರುವ ಸುಪ್ತ ಶಕ್ತಿ ಹಾಗೂ ಪ್ರತಿಭೆ ಏನು ಎಂಬುದನ್ನು ಗುರುತಿಸಿಕೊಳ್ಳಲು ಈ ಕಾರ್ಯಕ್ರಮ ದಾರಿದೀಪವಾಗಲಿದೆ. ಇಂದಿನ ಎಐ ಹಾಗೂ ತಂತ್ರಜ್ಞಾನದ ಯುಗದಲ್ಲೂ ಕಲಾ ಹಾಗೂ ವಾಣಿಜ್ಯ ಪದವಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಹುದು, ಬೆಳೆಯಬಹುದು ಎನ್ನುವುದರ ಬಗ್ಗೆಯೂ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಸಿ. ನಾಗೇಂದ್ರ, ಅಧ್ಯಾಪಕರುಗಳಾದ ಡಾ. ಆಶಾಕುಮಾರಿ, ಡಾ. ಮಹೇಶ್, ಡಾ. ಗಿರೀಶ್, ಡಾ. ಕುಸುಮ ಹಾಗೂ ಡಾ. ಗೋಪಾಲ್ ಸೇರಿದಂತೆ 500ಕ್ಕೂ ಹೆಚ್ಚು ಪ್ರಥಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon