ಬೆಂಗಳೂರು: ವಿಯಟ್ನಾಂ ನ ದಲಾತ್ ನಲ್ಲಿ ಜುಲೈ 27 ರಿಂದ ಆಗಸ್ಟ್ 2 ರವರಿಗೆ ನಡೆದ ವರ್ಲ್ಡ್ ಜೂನಿಯರ್ ಟೂರಿಸಂ ಅಂಬಾಸಿಡಾರ್-2026 ನಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಕಿಂಗ್ ಮತ್ತು ಪ್ರಿನ್ಸೆಸ್ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಕಿಂಗ್ ವಿಭಾಗದಲ್ಲಿ ಮೆಂಟರ್ ಅತುಲ್ ಸುರೇಶ್ ಅವರಿಂದ ತರಬೇತಿ ಪಡೆದ ಅಭಿನವ್ ಮೋಸ್ಟ್ ಚಾರ್ಮಿಂಗ್ ಎನ್ನುವ ಬಿರುದಿನ ಜೊತೆಗೆ ಎರಡನೇ ಸ್ಥಾನವನ್ನು ಪಡೆದರೆ, ಪುಟಾಣಿ ಯುತಿ ಬಿ ಪ್ರಿನ್ಸೆಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದವರಾಗಿದ್ದಾರೆ. ಇವರುಗಳು ಕ್ರಮವಾಗಿ ವಿಲಾಸನ್ ಮತ್ತು ವಿನಿ ಹಾಗೂ ಬಸವ ಪ್ರಸಾದ್ ಮತ್ತು ಲಕ್ಷ್ಮೀ ದೇವಿ ಅವರುಗಳ ಸುಪುತ್ರ, ಸುಪುತ್ರಿಯರಾಗಿದ್ದಾರೆ. ಈ ಕಿರೀಟವನ್ನು ಪಡೆದ ಇಬ್ಬರ ಕುಟುಂಬಸ್ಥರು ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಸಂಭ್ರಮಾಚರಣೆ ಸಮಾರಂಭವನ್ನು ಕೂಡ ಹಮ್ಮಿಕೊಂಡು ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅಭಿನವ್, ಇದು ನನ್ನ ಮೊದಲ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದರಿಂದ ನನಗೆ ಮೊದ ಮೊದಲು ಸಾಕಷ್ಟು ಭಯವಾಗಿತ್ತು. ನನ್ನಲ್ಲಿ ನಾನು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಿಕೊಂಡು ಮುನ್ನಡೆದ ಕಾರಣ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಂತಹ ಅವಕಾಶ ದೊರೆಯಿತು. ಈ ಕಾರಣಕ್ಕೆ ಸಾಕಷ್ಟು ಹೊಸ ಪರಿಚಯವನ್ನು ಮಾಡಿಕೊಳ್ಳುವ ಸದವಕಾಶ ಕೂಡ ನನ್ನದಾಯಿತು. ಈ ಪ್ರಶಸ್ತಿಯನ್ನು ಪಡೆಯಲು ಕಾರಣರಾದ ತಾಯಿ ವಿನಿ ಮತ್ತು ಕೋಚ್ ಅತುಲ್ ಸುರೇಶ್ ಅವರುಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ತಾಯಿ ವಿನಿ ಕೂಡ ಮಾತನಾಡಿ, ಈ ಮೊದಲು ಅಭಿನವ್ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಕಂಪಿಟೇಶನ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ. ಮಾಡೆಲಿಂಗ್ ಅನ್ನು ಅವನು ಉತ್ಸಾಹದಿಂದ ಅಭ್ಯಾಸ ನಡೆಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪೂರ್ಣ ಪ್ರಜ್ಞಾ ಶಾಲೆಯಲ್ಲಿ 3 ನೇ ತರಗತಿ ಓದುತ್ತಿರುವ ಯುತಿ ಬಿ ಮಾತನಾಡಿ, ಮಾಡೆಲಿಂಗ್ ನನ್ನ ಪ್ಯಾಶನ್ ಆಗಿದೆ. ನನ್ನ ತಂದೆ ತಾಯಿ ಸದಾ ಬೆನ್ನುಲುಬಾಗಿ ನಿಂತು ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ತಿಳಿಸಿದರು. ಇನ್ನು ಬಸವ ಪ್ರಸಾದ್ ಮತ್ತು ಲಕ್ಷ್ಮೀ ದೇವಿ ಅವರುಗಳ ಸಂತಸವನ್ನು ಹಂಚಿಕೊಳ್ಳುತ್ತಾ, ಸುಮಾರು ಒಂದೂವರೆ ವರ್ಷದಿಂದ ಮಾಡೆಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ಫೀಲ್ಡ್ ನಲ್ಲಿ ಅವಳು ಉನ್ನತಿ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಇದು ಅವಳ ನಾಲ್ಕನೇ ಷೋ ಆಗಿದ್ದು, ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಿ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದರು.














