ಬೆಂಗಳೂರು: ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ, ಇದು ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನದ ಫಲ ಎಂದು ಡಾ ಎನ್ ಶಿವಶಂಕರ್ ಹೇಳಿದರು.
ಶನಿವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಕೆ.ಆರ್ ವೃತ್ತದ ಕೇಂದ್ರ ಕಾರ್ಪೊರೇಟ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನೀಯರು ದೇಶದ ಸ್ವಾತಂತ್ರ್ಯ ಮತ್ತು ಅದರ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸ್ವಾತಂತ್ರ್ಯವು ನಮಗೆ ಹಕ್ಕುಗಳನ್ನು ನೀಡುವುದರ ಜೊತೆಗೆ ಜವಾಬ್ದಾರಿಗಳನ್ನೂ ತಂದು ಕೊಟ್ಟಿದೆ. ಅದರಂತೆ ಜನರಿಗೆ ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಯೋಚಿತ ಸೇವೆಯನ್ನು ನೀಡುವುದು ಪ್ರಮುಖ ಕರ್ತವ್ಯವಾಗಿದೆ. ಪ್ರಸ್ತುತ ದೇಶವು ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಇಂಧನ ಕ್ಷೇತ್ರಗಳಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸುತ್ತಿದೆ. ಈ ಅಭಿವೃದ್ಧಿಯ ಪ್ರಯೋಜನವು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ಮಾಡುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿ ಕೇವಲ ಸರ್ಕಾರದ ಪ್ರಯತ್ನದಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ನಡುವಳಿಕೆ ಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ, ಸಾರ್ವಜನಿಕ ಸಂಪತ್ತನ್ನು ಕಾಪಾಡಿದಾಗ, ಪರಿಸರವನ್ನು ಸಂರಕ್ಷಿಸಿದಾಗ ಮತ್ತು ಸಮಾಜದಲ್ಲಿ ಏಕತೆ ಹಾಗೂ ಸೌಹಾರ್ದತೆಯನ್ನು ಬೆಳೆಸಿದಾಗ ಮಾತ್ರವೇ ಅದು ನಿಜವಾದ ದೇಶಭಕ್ತಿ ಎನ್ನಿಸಿಕೊಳ್ಳುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರಗಳ ಸ್ವಚ್ಛತೆಯನ್ನು ಕಾಪಾಡಲು ಬೆಸ್ಕಾಂ ಸಕ್ರಿಯವಾಗಿದ್ದು, ಪಾದಚಾರಿ ಮಾರ್ಗಗಳಲ್ಲಿರುವ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸುವುದು ಹಾಗೂ ಟ್ರಾನ್ಸ್ಫಾರ್ಮರ್ ಸೆಂಟರ್ಗಳ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂಟೆನ್ಸಿವ್ ಡ್ರೈವ್ ನಡೆಸುತ್ತಿದೆ. ಇದರಡಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಜನಸೇವೆಯನ್ನು ಆದ್ಯತೆಯಾಗಿಸಬೇಕು. ಹಾಗಾದರೆ ಮಾತ್ರ ಬಲಿಷ್ಠ, ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಡಾ ಎನ್ ಶಿವಶಂಕರ್ ತಿಳಿಸಿದರು.
ಈ ವೇಳೆ ಬೆಸ್ಕಾಂ ನ ವಿವಿಧ ವೃತ್ತಗಳ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವ್ಯವಸ್ಥಾಪಕ ಧನಂಜಯ ಸೇರಿದಂತೆ ವಿವಿಧ ವಲಯಗಳ ಇಂಜಿನಿಯರ್ ಗಳು,ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














