ಬೆಂಗಳೂರು: ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ ಮಾಡುತ್ತೇವೆ ಎಂದು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಅದಕ್ಕೆ ಸರ್ಕಾರ ಬದ್ಧವಾಗಿದ್ದು, ಒಂದು ತಿಂಗಳೊಳಗೆ ಹೊಸ ಆಯೋಗದ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಮಂಗಳವಾರ ವಸಂತನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಸ್ಐಆರ್ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಹುನ್ನಾರ ನಡೆಯುತ್ತಿದೆ. ನಿಮ್ಮ ವೋಟ್ರ್ ಕಾರ್ಡ್ ಡಿಲೀಟ್ ಆದೀತು, ಅದಕ್ಕೆ ನೀವೆಲ್ಲರೂ ಎಚ್ಚರವಾಗಿರಬೇಕು. ನಿಮಗೆ ಪೂರಕವಾಗುವ ರೀತಿಯಲ್ಲಿ ಎಲ್ಲರಿಗೂ ಮೂಲನಿವಾಸಿ ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಆದಿವಾಸಿಗಳು ಹಕ್ಕಿಗಳನ್ನು ಹಿಡಿದು ಬದುಕುವ ಜನ. ಹುಟ್ಟುವಾಗ ನಮ್ಮ ಕಡೆ ಯಾವ ಬಟ್ಟೆ, ಯಾವ ಅಧಿಕಾರವೂ ಇರುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳುಬೇಕು. ನಾವೂ ಕೂಡ ಮೂಲ ಆದಿವಾಸಿಗಳೇ. ಎಷ್ಷೇ ದೊಡ್ಡ ಶ್ರೀಮಂತರು ಆದರೂ ಕೂಡ ನಿವೃತ್ತಿಯ ಸಮಯದಲ್ಲಿ ಹಳ್ಳಿಗಳಿಗೆ ಹೋಗಿ ಜಮೀನು ತೆಗೆದುಕೊಂಡು ಪ್ರಕೃತಿಯೊಂದಿಗೆ ಜೀವಿಸಲು ಬಯಸುತ್ತಾರೆ. ನೀವೆಲ್ಲಾ ಪ್ರಕೃತಿಯ ಮಕ್ಕಳೇ ಅದನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ನೀವು ಶಿಕ್ಷಣಕ್ಕೆ ಆದ್ಯತೆ ನೀಡಿ, ವಿದ್ಯಾವಂತರು, ಪ್ರಜ್ಞಾವಂತರಾಗಿ. ಆದರೆ ನಿಮ್ಮ ಮೂಲ ಕಸುಬು ಬಿಡಬೇಡಿ. ಬೇರು ಗಟ್ಟಿಯಾಗಿದ್ದಾರೆ ಮಾತ್ರ ಹಣ್ಣು ಪಡೆಯಲು ಸಾಧ್ಯ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಿಮ್ಮ ಮೂಲ ತತ್ವ, ಬದುಕಿನ ಆದರ್ಶ ಮರೆಯಬೇಡಿ ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನಟ ಪ್ರಕಾಶ್ರಾಜ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಛಲ, ಪಕ್ಷಕ್ಕಾಗಿ ದುಡಿದ್ದರಿಂದ ಸಿಎಂ ಆದರು. ಆದಿವಾಸಿಗಳು ಈ ಭೂಮಿಯ ಮೂಲ ನಿವಾಸಿಗಳಾಗಿದ್ದಾರೆ. ಅವರಲ್ಲಿ ಇರುವ ಬಣ್ಣ ಯಾರಲ್ಲಿಯೂ ಇಲ್ಲ. ಅಮೆರಿಕದಲ್ಲಿ 1911ರಲ್ಲಿ ಅದಿವಾಸಿಗಳ ವಿರುದ್ಧ ಕೇಸ್ ಹಾಕಲಾಯಿತು. ಆದರೆ ಆ ಕೇಸ್ 100 ವರ್ಷ ಆದರೂ ಮುಗಿಯಲಿಲ್ಲ. ಬಳಿಕ ಆ ಕೇಸ್ ಇತ್ಯರ್ಥವಾಗುವ ಹೊತ್ತಿಗೆ ಕೋರ್ಟ್ ನಲ್ಲಿ ಕ್ಷಮೆ ಕೇಳಲು ಒಬ್ಬ ಆದಿವಾಸಿಗಳು ಅಲ್ಲಿ ಇರಲಿಲ್ಲ. ಅಷ್ಟರಲ್ಲಿ ಆ ದೇಶ ಬಿಟ್ಟುಹೋಗಿದ್ದರು. ಮೂಲ ಆದಿವಾಸಿಗಳಿಗೆ ಅನ್ಯಾಯ ಮಾಡಿದರೆ ನಮಗೇ ನಷ್ಟ. ಆದ್ದರಿಂದ ಸಿಎಂ ಕೂಡಲೇ ತಜ್ಞರನ್ನು ನೇಮಕ ಮಾಡಿ ಆದಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಸಚಿವ ಅಜಯ್ ಸಿಂಗ್, ಶಾಸಕ ಪ್ರಕಾಶ್ ಕೋಳಿವಾಡ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ, ಜಗ್ಗು, ಹನುಮಂತಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.














