ಬೆಂಗಳೂರು/ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಕಳೆದ 40 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ನಾಯಕ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷ ನಜೀರ್ ಕಂಗನೊಳ್ಳಿ ಅವರಿಗೆ ಮುಂಬರುವ ವಿಧಾನ ಪರಿಷತ್. ಚುನಾವಣೆಯಲ್ಲಿ ನಾಮನಿರ್ದೇಶನ ಮಾಡುವ ಮೂಲಕ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಧ್ಯಾನ ಯೋಗಾಶ್ರಮದ ಪೀಠಾಧ್ಯಕ್ಷ ಮಹೇಶ್ವರಾನಂದ ಸ್ವಾಮೀಜಿ ತಿಳಿಸಿದರು.
ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಕಂಗನೊಳ್ಳಿ ಅವರು ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದಾರೆ. ಡಾ. ಜಿ. ಪರಮೇಶ್ವರ್ ಅವರ ನಿಕಟವರ್ತಿಯಾಗಿ, ಅನುಯಾಯಿಯಾಗಿ ಹಾಗೂ ಪಕ್ಷದ ಹಿತೈಷಿಯಾಗಿ ನಿರಂತರವಾಗಿ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ತ್ರಿವಳಿ ಜಿಲ್ಲೆಗಳಲ್ಲಿ ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಅವರ 40 ವರ್ಷಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಿ ವಿಕಾಸಸೌಧ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು. ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ರಾಷ್ಟ್ರೀಯ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಈ ನಿಷ್ಠಾವಂತ ಮುಖಂಡನ ಬೆಂಬಲವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಕಂಗನೊಳ್ಳಿ ಅವರ ಸೇವೆಯನ್ನು ಗುರುತಿಸಿ, ಮುಂಬರುವ ದಿನಗಳಲ್ಲಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತು ಸಮುದಾಯದ ಸೇವೆಗೆ ಮತ್ತಷ್ಟು ಬಲ ತುಂಬಬೇಕು ಎಂದು ಮಹೇಶ್ವರಾನಂದ ಸ್ವಾಮೀಜಿ ವಿನಂತಿಸಿದರು.















