ಬೆಂಗಳೂರು: ಫ್ರೀಡಂ ಪಾರ್ಕ್ ಅವರಣದಲ್ಲಿ ಗುರುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಮತ್ತು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮತ್ತು ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಅಗಮಿಕರ ಉಪಾಧಿಂತರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಸ್.ಎನ್.ದೀಕ್ಷಿತ್, ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್ ಜಿಲ್ಲಾ ಪ್ರತಿನಿಧಿಗಳಾದ ಪಿ.ಆರ್.ಪ್ರಕಾಶ್, ಕೆ.ಎನ್.ರವಿಕುಮಾರ್, ನಾಗೇಶ್, ದಿಲೀಪ್, ಸತೀಶ್ ಉರಾಳ್, ಮಂಜುನಾಥ್,ಬ್ರಾಹ್ಮಣ ಸಮುದಾಯದ ಮುಖಂಡರುಗಳಾದ ಎಲ್.ಜಯಸಿಂಹ ಭಾರದ್ವಾಜ್, ನಾಗಭೂಷಣ್ ರಾವ್ ಸೇರಿಂದತೆ ಬ್ರಾಹ್ಮಣ ಮಹಾಸಭಾದ ಸದಸ್ಯರು, ಸಮುದಾಯದ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಎಸ್.ರಘುನಾಥ್ ಮಾತನಾಡಿ ಕಳೆದ 70ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಪಕ್ಷದಲ್ಲಿ ನಿರ್ಣಯ ಮಾಡಿರುತ್ತಾರೆ.ಅವರ ಪಕ್ಷದ ನಿಲುವಿನ ಕುರಿತು ನಾವು ಮೂಗು ತುರಿಸುವ ಕೆಲಸ ಮಾಡಲ್ಲ. ಆದರೆ ಬ್ರಾಹ್ಮಣರನ್ನು ಸಚಿವ ಸಂಪುಟ ವಿಸ್ತರಣೆಯಿಂದ ಹೊರಗಿಡಲಾಗಿರುವುದು ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರಗೆ ಬ್ರಾಹ್ಮಣರು ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸಚಿವ ಸ್ಥಾನ ಸಿಗದಿರುವುದು ಅನ್ಯಾಯವಾಗಿದೆ. ಯಾಕೆ ನಮ್ಮ ಸಮುದಾಯ ಕಡೆಗಣಿಸಲಾಗಿದೆ ಎಂದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ನಮ್ಮ ಸಮುದಾಯದವರು ಇದ್ದಾರೆ ಎಂದರು.
ನಮ್ಮ ಪ್ರತಿಭಟನೆ ಸರ್ಕಾರದ ವಿರುದ್ದ ಅಥವಾ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ವಿರುದ್ದ ಅಲ್ಲ. ಹಿರಿಯ ಶಾಸಕರುಗಳಾದ ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್, ವಿಶ್ವಾಸವೈದ್ಯ ಇದ್ದಾರೆ. ಬ್ರಾಹ್ಮಣರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಸಾಮಾಜಿಕ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ಆದ್ದರಿಂದ ಕನಿಷ್ಠ ಒಂದು ಸಚಿವ ಸ್ಥಾನ ನಮ್ಮ ಸಮಾಜಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಅಶೋಕ್ ಹಾರನಹಳ್ಳಿ ಮಾತನಾಡಿ ಬ್ರಾಹ್ಮಣರು ಸಂಖ್ಯೆ ಕಡಿಮೆ ಇದೆ ಎಂದು ಕಡಗಣನೆ ಮಾಡಬೇಡಿ. ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆರವರು ಮುಖ್ಯಮಂತ್ರಿಯಾಗಿದ್ದಾರೆ. ಶುದ್ದ ಚಾರಿತ್ಯ್ರವುಳ್ಳ ನಮ್ಮವರಿಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ. ರಾಜಸ್ತಾನ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ. ನಮ್ಮ ಸಮಾಜ ತೀರ್ಮಾನ ತೆಗೆದುಕೊಂಡರೆ ರಾಷ್ಟ್ರಮಟ್ಟದಲ್ಲಿ ಬಾರಿ ಬದಲಾವಣೆಯಾಗುತ್ತದೆ. ಪ್ರತಿಯೊಂದು ಜಾತಿಯವರಿಗೆ ಅವಕಾಶಕೊಡಿ, ನಮ್ಮ ಬ್ರಾಹ್ಮಣ ಸಮಾಜಕ್ಕೆ ಒಂದು ಸಚಿವ ಸ್ಥಾನ ಕೊಡಿ. ಮರು ವಿಚಾರಮಾಡಿ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.
ಅಸಗೋಡು ಜಯಸಿಂಹ ಮಾತನಾಡಿ ಆರ್.ಗುಂಡೂರಾವ್ ಬಡವರಿಗೆ ಭಾಗ್ಯಜ್ಯೋತಿ, ಕೆಂಪೇಗೌಡ ಬಸ್ ನಿಲ್ದಾಣ, ಹಲವಾರು ಯೋಜನೆಗಳು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದರು. ಬ್ರಾಹ್ಮಣರು ಈ ಸಮಾಜಕ್ಕೆ ಆನಿವಾರ್ಯವಾಗಿದ್ದಾರೆ. ಬ್ರಾಹ್ಮಣ ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ. ಬ್ರಾಹ್ಮಣರು ಜಾತ್ಯತೀತ ವಾದಿಗಳು. ದೇಶಪಾಂಡೆ ಒಂಬತ್ತು ಬಾರಿ, ದಿನೇಶ್ ಗುಂಡೂರಾವ್ ಆರು ಬಾರಿ ಶಾಸಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅಪಾರ ದೈವ ಭಕ್ತರು ಅವರ ಸರ್ಕಾರಕ್ಕೆ ಶುಭಕೋರುತ್ತೇವೆ. ಈ ಹಿನ್ನಲೆಯಲ್ಲಿ ಬ್ರಾಹ್ಮಣರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.















