ಬೆಂಗಳೂರು: ನಾನು ಮಾದಿಗ ಎಂದು ಇಷ್ಟು ವರ್ಷಗಳ ಕಾಲ ಹೇಳಿಕೊಳ್ಳುವ ಪರಿಸ್ಥಿತಿ ಇರಲಿಲ್ಲ, ಆದರೆ ಇಂದು ಘಂಟಾಘೋಷವಾಗಿ ನನ್ನ ಸಮುದಾಯವನ್ನು ಪ್ರಧಿನಿಧಿಸುವ ಸಂಕಲ್ಪ ಮಾಡುತ್ತೇನೆ ಎಂದು ಉದ್ಯಮಿ ಅಟ್ಟಿಕಾ ಬಾಬು ತಿಳಿಸಿದರು.
ಭಾನುವಾರ ಮೂಲ ಮಾದಿಗ ಮುಮ್ಮೆಂಟ್ ಕರ್ನಾಟಕ ವತಿಯಿಂದ ಶಿವಶರಣ ಮಾದಾರ ಚನ್ನಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಡ್ರಾಪ್ ಔಟ್ ವಿದ್ಯಾರ್ಥಿಗಳ ಅಭಿಯಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಮಾದಿಗ ಎಂದು ಗೊತ್ತಾದಾಗ ಹಲವು ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುವುದನ್ನೇ ಕೈಬಿಟ್ಟರು. ಎಲ್ಲಿ ನನ್ನ ವ್ಯಾಪಾರ ವಹಿವಾಟಿಗೆ ತೊಂದರೆ ಆಗುವುದೋ ಎಂದು ಭಾವಿಸಿ, ಎಲ್ಲಿಯೂ ಹೇಳಿಕೊಳ್ಳಲು ಹೋಗಲಿಲ್ಲ. ಈಗ ಅತಿ ಯಶಸ್ವಿ ಉದ್ಯಮಿಯಾಗಿ ನಾನು ಬೆಳೆದಿದ್ದು, ಸಮುದಾಯದ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕೆಂಬ ಸಂಕಲ್ಪ ಮಾಡಿದ್ದೇನೆ ಎಂದರು.
ಡಿ.ಎಸ್.ಎಸ್ ಸಂಘಟನೆಯಿಂದ ಬೆಳೆದು ಬಂದವನಾಗಿದ್ದೇನೆ. ನಂತರದ ದಿನಗಳಲ್ಲಿ ನನ್ನನ್ನು ಮುಸ್ಲಿಂ ಎಂದುಕೊಳ್ಳಲಾಯಿತು. ಅದಕ್ಕೆ ಉತ್ತರ ಕೊಡದೆ ಪರಿಶ್ರಮದಿಂದ ಸಂಸ್ಥೆಯನ್ನು ಕಟ್ಟಿದೆ. ಹೆಂಡತಿ ಇಸ್ಲಾಂ ಧರ್ಮದವಳಾಗಿದ್ದು, ನಾನು ಮಾದಿಗ ಎಂದು ಸ್ಪಷ್ಟಪಡಿಸಿದರು.
80 ಲಕ್ಷ ಮಾದಿಗರು ರಾಜ್ಯದಲ್ಲಿ ಇದ್ದಾರೆ:
80 ಲಕ್ಷ ಮಾದಿಗರು ರಾಜ್ಯದಲ್ಲಿ ಇದ್ದು, ಸುಮಾರು 25, 30 ಲಕ್ಷ ಜನಸಂಖ್ಯೆ ಇರುವ ಕೋಮುಗಳಿಗೆ ಅಂಜುವ ಪರಿಸ್ಥಿತಿ ಇದೆ. ಅವರು ಬುದ್ಧಿವಂತಿಕೆಗಳಿಂದ ರಾಜಕೀಯ ಸ್ಥಾನಗಳನ್ನು ಪಡೆಯುತ್ತಿದ್ದಾರೆ. ನಾವುಗಳು ಸೈಕಲ್ ಏರಿ ನಡೆದರೆ, ಅವರುಗಳು ಕಾರಿನಲ್ಲಿ ಮುನ್ನುಗ್ಗುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಕೂಡ ಸಾಕಷ್ಟು ತಾಕತ್ತು ಇದ್ದು, ಅದನ್ನು ಗುರುತಿಸುವ ಕಾರ್ಯೋನ್ಮುಖರಾಗುವ ಸುಸಮಯ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾದಿಗರು ಮುಖ್ಯಮಂತ್ರಿಯಾಗಬೇಕು:
ನಾವು ಈಗಲೂ ಆಫೀಸ್ ಮುಂದೆ ಧರಣಿಗಳನ್ನು ಮಾಡುವುದು, ಮನವಿ ಪತ್ರಗಳನ್ನು ನೀಡುವುದೇ ಗೆಲವು ಎಂದು ಭಾವಿಸುತ್ತಿದ್ದೇವೆ. ಮೀಸಲಾತಿ ದೊರೆತಿರುವುದಕ್ಕೆ ಸಮಾಧಾನ ಪಟ್ಟುಕೊಂಡು ಇದ್ದೇವೆ. ಆದರೆ ಅತಿ ಹೆಚ್ಚು ಜನಸಂಖ್ಯೆ ಇರುವ ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಸರಿಯಾಗಿ ಆಗ್ರಹಿಸುವುದನ್ನು ಮರೆತಿದ್ದೇವೆ ಎಂದು ಅಟ್ಟಿಕಾ ಬಾಬು ಹೇಳಿದರು















