ಬೆಂಗಳೂರು: ಪ್ರತಿಭಾ ನಾಟ್ಯಾಲಯಕ್ಕೆ ಸುಮಾರು 26 ವರ್ಷಗಳ ಇತಿಹಾಸವಿದ್ದು, ಸಾವಿರಾರು ವಿದ್ಯಾರ್ಥಿಗಳು ನೃತ್ಯ ಶಿಕ್ಷಣವನ್ನು ಪಡೆದು ದೇಶ, ವಿದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಪಸರಿಸಿರುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವಿದುಷಿ ಪವಿತ್ರಾ ಪ್ರಶಾಂತ್ ನುಡಿದರು.
ಭಾನುವಾರ ಸಂಜೆ ಮಲ್ಲೇಶ್ವರದ ಸೇವಾ ಸದನದಲ್ಲಿ ಪ್ರತಿಭಾ ನಾಟ್ಯಾಲಯದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಳ ಅದ್ಬುತವಾದ ನೃತ್ಯ ಪ್ರದರ್ಶನ ಇಂದು ನೋಡುವುದಕ್ಕೆ ಸಾಧ್ಯವಾಗಿದೆ. ನಮ್ಮ ನಾಡಿನ ಕಲೆಯನ್ನು ಉಳಿಸಬೇಕು ಎನ್ನುವ ಸಂಕಲ್ಪ ಪ್ರದರ್ಶನದಲ್ಲಿ ಕಂಡು ಬಂದಿತು. ಬೇರೆಯೇ ಲೋಕಕ್ಕೆ ಹೋಗಿ ಬಂದ ಅನುಭವವಾಯಿತು ಎಂದರು.
ನಾಟ್ಯಾಲಯದ ಮುಖ್ಯಸ್ಥರಾದ ಪ್ರತಿಭಾ ಕಿಣಿ ಅವರು ಸಾಕಷ್ಟು ಪರಿಶ್ರಮದಿಂದ ಇಂದಿನ ನೃತ್ಯ ಪ್ರದರ್ಶನವನ್ನು ಆಯೋಜಿಸಿದ್ದಾರೆ. ವಿಶೇಷವಾದ ನೃತ್ಯ ಸಂಯೋಜನೆ ಇವರದ್ದಾಗಿದೆ. ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿ ಇಂದಿನ ಪ್ರದರ್ಶನವನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಎಂ ಸುಧಾಕರ್ ಪೈ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಭಾ ಕಿಣಿ ಅವರ ಇಡೀ ಕುಟುಂಬ ನನಗೆ ತುಂಬಾ ಪರಿಚಯಸ್ಥರು. ಇವತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಸುಯೋಗವಾಗಿದೆ. ವಿವಿಧ ಸ್ತರದ ವಿದ್ಯಾರ್ಥಿಗಳು ಒಳ್ಳೆಯ ಕಲಾಪ್ರದರ್ಶನವನ್ನು ನೀಡಿದ್ದು, ರಸದೌತಣವನ್ನು ಸವಿದ ಅನುಭವವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೇರೆ ಬೇರೆ ಊರುಗಳಿಂದ ಹಾಲಿ ಹಾಗೂ ಈಗಾಗಲೇ ಕಲಿತು ಉನ್ನತ ಹುದ್ದೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಸಹ ಬಂದು ತಮ್ಮ ನೃತ್ಯವನ್ನು ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮವನ್ನು ವೀಕ್ಷಿಸಲು ಸಹ ಹಲವು ಊರುಗಳಿಂದ ಜನರು ಆಗಮಿಸಿದ್ದಾರೆ. ಭಾರತೀಯ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಡೆ ಸಂಕಲ್ಪ ಮಾಡಿರುವ ಪ್ರತಿಭಾ ನೃತ್ಯಾಲಯದ ಪ್ರಯತ್ನ ಶ್ಲಾಘನೀಯ ಎಂದರು.
ಗುರು, ವಿದುಷಿ ಪ್ರಭಾ ಕಿಣಿ ಮಾತನಾಡಿ, 26 ವರ್ಷಗಳಿಂದ ಭರತನಾಟ್ಯ ಶಾಲೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಮಕ್ಕಳು, ಪೋಷಕರಿಗೆ ನೃತ್ಯವನ್ನು ಅಭ್ಯಸಿಸುತ್ತಾ ಹೋದರೆ ಓದಿಗೆ ಅಡ್ಡಿಯಾಗುತ್ತದೆ ಎನ್ನುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವುದು ಇಂದಿನ ಕಾರ್ಯಕ್ರಮದ ಉದ್ದೇಶವಾಗಿದೆ. ನೃತ್ಯಕಲೆಯನ್ನು ನಿರತರ ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತವಾಗಿ, ಮೆದುಳು ಚುರುಕಾಗುತ್ತದೆ. ಇದನ್ನು ಸಾಬೀತು ಪಡಿಸಲು ಇಂದಿನ ಕಾರ್ಯಕ್ರಮಕ್ಕೆ ನಮ್ಮ ಉನ್ನತ ಹುದ್ದೆಯಲ್ಲಿದ್ದು, ನೃತ್ಯ ಕಲೆಯನ್ನು ಇನ್ನೂ ಬೆಳೆಸಿಕೊಂಡು ಹೋಗುತ್ತಿರುವ ಹಳೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪುರಸ್ಕರಿಸಲಾಯಿತು ಎಂದರು.















