ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಡಿಸಿಎಂ, ಹೆಚ್ಚಿನ ಸಚಿವ ಸ್ಥಾನ ನೀಡಲು ಆಗ್ರಹ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ್ದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದು ಅಭಿನಂದನಾರ್ಹವಾಗಿದೆ. ಅವರ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಎರಡು ಡಿಸಿಎಂ ಸ್ಥಾನ ಹಾಗೂ ಕನಿಷ್ಠ ಹತ್ತು ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಆರ್. ಮೇಟಿ ಆಗ್ರಹಿಸಿದರು.

ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿ ಹದಿನಾಲ್ಕು ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕ ಭಾಗಕ್ಕೆ ಪ್ರಸ್ತುತ ಐವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಉತ್ತರ ಕರ್ನಾಟಕ ಭಾಗದ ಪಾತ್ರ ಮಹತ್ವದ್ದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಪಕ್ಷ ಹೆಚ್ಚಿನ ಸ್ಥಾನ ಪಡೆಯುತ್ತದೊ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಮಾತಿದೆ. ಅದರಂತೆ ಈ ಭಾಗದ 14 ಜಿಲ್ಲೆಗಳಲ್ಲಿ ಬರುವ 96 ಕ್ಷೇತ್ರಗಳಲ್ಲಿ 65 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದರು.

ಪ್ರತಿ ಜಿಲ್ಲೆಗೂ ಆಯಾ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು, ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿರುವುದರಿಂದ ಕನಿಷ್ಠ ಮೂರು ಸಚಿವ ಸ್ಥಾನ ನೀಡಬೇಕು. ಪ್ರಸ್ತುತ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಸಿಎಂ, ಡಿಸಿಎಂ, ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ದಕ್ಷಿಣ ಕರ್ನಾಟಕ ಭಾಗದವರೇ ಇದ್ದು, ಉತ್ತರ ಕರ್ನಾಟಕ ಭಾಗದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಎಚ್. ಕೆ. ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಅನೇಕ ಹಿರಿಯರಿದ್ದಾರೆ ಅವರಲ್ಲಿ ಇಬ್ಬರು ಹಿರಿಯರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ನವ ನಿರ್ಮಾಣ ವೇದಿಕೆ ಗೌರವ ಅಧ್ಯಕ್ಷ ಬಸವರಾಜ ದಿಂಡೂರ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರಲ್ಲಿ ಯಾರಿಗಾದರೂ ಇಬ್ಬರಿಗೆ ಡಿಸಿಎಂ ಸ್ಥಾನ ನೀಡಲಿ, ಯಾವುದೇ ನಿರ್ಧಿಷ್ಟ ಸಮುದಾಯಕ್ಕೆ ನೀಡುವಂತೆ ನಾವು ಮನವಿ ಮಾಡುತ್ತಿಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವಕಾಶ ಕಲ್ಪಿಸಬೇಕು ಎಂದರು.

ಮಹಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ, ರಾಜ್ಯದ ಅರ್ಧ ಭಾಗ ಹೊಂದಿರುವ ಉತ್ತರ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಶಾಸಕರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕದ ಭಾಗದ ಹೆಚ್ಚು ಶಾಸಕರಿಗೆ ಸಚಿವ ಸ್ಥಾನ ನೀಡಿ ಪ್ರಾತಿನಿಧ್ಯ ನೀಡಿದರೆ ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ದೊರೆತಂತಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಸವರಾಜ ಬೀಳೂರು, ಎಂ.ವಿ. ನೆಗಳೂರು, ಕಾರ್ಯದರ್ಶಿ ಬಸಯ್ಯ ನಂದಿಕೋಲ, ಸಹ ಸಂಘಟನಾ ಕಾರ್ಯದರ್ಶಿ ಗಳಾದ ಶಾಂತೇಶ್ ಮಠ, ರಾಮನಗೌಡ ಬಿರಾದಾರ ಸಮಾಜ ಸೇವಕರಾದ ಮುನಿಕೃಷ್ಣ ಮತ್ತಿತರರು ಹಾಜರಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon