ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹವಾಗಿದ್ದು, ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ಇದರ ಹೊರತಾಗಿ ಆಶ್ರಮ ಪಿಟಿಸಿಎಲ್ ಜಮೀನು ದಲಿತರಿಗೆ ಹಿಂತಿರುಗಿಸಬೇಕು ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಸಮತಾ ಸೈನಿಕ ದಳ ನಡೆಸಿದ ಹೋರಾಟದ ಫಲವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಡಿಡಿಎಲ್ಆರ್ ಅಧಿಕಾರಿಗಳು ಸ್ಥಳದಲ್ಲಿ ಸರ್ವೆ ನಡೆಸಿ ಸರ್ಕಾರಿ, ದಲಿತರ ಹಾಗೂ ಬಡವರ ಜಮೀನಿನ ಒತ್ತುವರಿ ಕುರಿತು ವರದಿ ಸಿದ್ಧಪಡಿಸಿದ್ದರೂ, ಇದುವರೆಗೆ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಜುಲೈ 17ರಿಂದ ಸಮತಾ ಸೈನಿಕ ದಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ತನಿಖಾ ತಂಡ ಯಾವುದೇ ರಾಜಕೀಯ ಅಥವಾ ಇತರೆ ಒತ್ತಡಗಳಿಗೆ ಮಣಿಯದೆ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪಿಟಿಸಿಎಲ್ ಕಾಯ್ದೆ–1978ರಡಿ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದಂತೆ ದಲಿತರಿಗೆ ಸೇರಿದ ಜಮೀನನ್ನೂ ಆರ್ಟ್ ಆಫ್ ಲಿವಿಂಗ್ ಆಶ್ರಮ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ಈ ವಿಷಯಕ್ಕೆ ಎಸ್ಐಟಿ ತನಿಖೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪಿಟಿಸಿಎಲ್ ಆದೇಶದಂತೆ ಜಮೀನನ್ನು ವಶಪಡಿಸಿಕೊಂಡು ಅರ್ಹ ದಲಿತ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಮುಂಭಾಗ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಜಿ.ಸಿ. ವೆಂಕಟರಮಣಪ್ಪ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ದಲಿತ ಚಳುವಳಿ ನಾಗೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಅರ್ಜುನ್ ಗೋಪಾಲಯ್ಯ, ರಾಜ್ಯ ಕಾರ್ಯಾಧ್ಯಕ್ಷ ಡಾ. ಜಿ. ಗೋವಿಂದಯ್ಯ, ರಾಜ್ಯ ಖಜಾಂಚಿ ಎಸ್. ಕೆಂಚಯ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಗುಳಕಮಲೆ ಜಿ.ಕೆ. ಗೋಪಾಲ್, ಸಾಹಿತಿ ಹಾಗೂ ಚಿಂತಕ ಡಾ. ಸತ್ಯಮೂರ್ತಿ ಗೂಗಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಸ್ವಾಮಿ ಉಪಸ್ಥಿತರಿದ್ದರು.














