ಬೆಂಗಳೂರು: ಪರವಾನಗಿ ಭೂಮಾಪಕರನ್ನು ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಸರ್ಕಾರಿ ಹುದ್ದೆಯಲ್ಲಿ ಸಕ್ರಮಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ಶೀರ್ಷಿಕೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂ ಮಾಪಕರ ಸಂಘದ ಅಧ್ಯಕ್ಷ ತಿರುಮಲೇಗೌಡ ಆಗ್ರಹಿಸಿದರು.
ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಭೂ ಮಾಪಕರ ಸಂಘದ ವತಿಯಿಂದ ನಡೆದ ಪ್ರಭಟನೆಯಲ್ಲಿ ಮಾತನಾಡಿದ ಅವರು, ಪರವಾನಗಿ ಭೂಮಾಪಕರನ್ನು 1998-99 ರಲ್ಲಿ ಕೆ.ಎಲ್.ಆರ್ ಆಕ್ಟ್ 46 ರ ತಿದ್ದುಪಡಿಯಂತೆ ಇಲಾಖೆಗೆ ಪರಿಚಯಿಸಲಾಗಿತ್ತು. 2002 ರಲ್ಲಿ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲಿ ತರಬೇತಿ ನೀಡಿ ಜಿಲ್ಲಾವಾರು ಕೆಲಸ ನಿರ್ವಹಿಸಲು ಪರವಾನಗಿ ನೀಡಲಾಗಿತ್ತು ಆದರೆ ಇವರ್ಯಾರನ್ನೂ ಕೂಡ ಇಲ್ಲಿಯವರೆಗೆ ಅವರವರ ಹುದ್ದೆಯಲ್ಲಿ ಸಕ್ರಮಗೊಳಿಸುವ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು.
ಇಲಾಖೆಯಲ್ಲಿ ಎರಡನೇ ದರ್ಜೆ ಭೂಮಾಪಕರ ಸಂಭಾವನೆಯನ್ನು ಪ್ರತಿ ಕಡತಕ್ಕೆ 300 ರೂಗಳಂತೆ 18 ಖಡತಗಳಿಗೆ ಸೀಮಿತಗೊಳಿಸಲಾಗಿದೆ. ಅಂದರೆ ರೈತರಿಂದ ನೇರವಾಗಿ ಹಣಪಡೆದು ಅದರಲ್ಲಿ 20% ಹಣವನ್ನು ಇಲಾಖೆಗೆ ಕಟ್ಟಿ ಉಳಿದ 80% ಹಣವನ್ನು ಪಡೆದು ರೈತರ ಕೆಲಸ ಮಾಡಿಕೊಡಲು ನಡವಳಿಯನ್ನು ತರಲಾಗಿದೆ. ಆದರೆ ಇಂದಿಗೂ ಸಮಾನ ವೇತನವನ್ನು ಜಾರಿಮಾಡಲಾಗಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಈ ಸಂದರ್ಭದಲ್ಲಿ ಮಾತನಾಡಿದ ಸೀತಾರಾಮ ಗುಂಡಪ್ಪ ರಾಜ್ಯದ ಭೂ ದಾಖಲೆಗಳ ನಿರ್ವಹಣೆ, ಸರ್ವೇ ಕಾರ್ಯ, ಸಾರ್ವಜನಿಕ ಹಾಗೂ ರೈತರ ಜಮೀನು ಸಮಸ್ಯೆಗಳ ಪರಿಹಾರದಲ್ಲಿ ಭೂಮಾಪಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಅವರಿಗೆ ಅಗತ್ಯವಾದ ಮೂಲಸೌಕರ್ಯ, ಸಿಬ್ಬಂದಿ ಮತ್ತು ಸೇವಾ ಭದ್ರತೆ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಭೂಮಾಪಕರ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿ ಸಿಬ್ಬಂದಿ ಕೊರತೆಯನ್ನು ನಿವಾರಿಸಬೇಕು. ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಅಗತ್ಯ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಸಾರ್ವಜನಿಕರಿಗೆ ವೇಗವಾಗಿ ಮತ್ತು ಪಾರದರ್ಶಕವಾಗಿ ಸೇವೆ ನೀಡಲು ಸರ್ವೇ ಇಲಾಖೆಯನ್ನು ಆಧುನೀಕರಿಸಬೇಕು. ಭೂಮಾಪಕರ ಸೇವಾ ಭದ್ರತೆ, ಪದೋನ್ನತಿ ಹಾಗೂ ವೇತನ ಸಂಬಂಧಿತ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಬೇಕು.ರೈತರು ಮತ್ತು ಸಾರ್ವಜನಿಕರು ಭೂ ದಾಖಲೆ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಭೂಮಾಪಕರ ಸಮಸ್ಯೆಗಳನ್ನು ಪರಿಷ್ಕರಿಸುವುದು ಸಾರ್ವಜನಿಕ ಹಿತಾಸಕ್ತಿಗೂ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಭೂಮಾಪಕರ ಹೋರಾಟವನ್ನು ನಿರ್ಲಕ್ಷಿಸದೇ ಅವರೊಂದಿಗೆ ತಕ್ಷಣ ಮಾತುಕತೆ ನಡೆಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು. ಆಮ್ ಆದ್ಮಿ ಪಕ್ಷ ಭೂಮಾಪಕರ ನ್ಯಾಯಸಮ್ಮತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸದಾ ಜೊತೆಯಾಗಿರುತ್ತದೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಡಿ.ಎಂ, ಗೌರವಾಧ್ಯಕ್ಷ ಕೆ. ಪಿ ಭಾರ್ಗವಲು, ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಎನ್.ಕೆ, ಬೆಂಗಳೂರು ನಗರದ ನಿರ್ದೇಶ ಷಣ್ಮುಖ ಪಿ ಆರ್ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.














