ಬೆಂಗಳೂರು: ನೆಲಮಂಗಲದ ಆದಿಚುಂಚನಗಿರಿ ಆಯುವೇದ ಆಸ್ಪತ್ರೆಯ ತಜ್ಞ ವೈದ್ಯೆ ಡಾ ರೋಹಿಣಿ ಎಚ್. ಡಿ ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಶಿಕ್ಷಣ ತಜ್ಞೆ, ವೈದ್ಯ ಮತ್ತು ಸಂಶೋಧಕಿ ಡಾ ರೋಹಿಣಿ ಅವರು ಪ್ರಾಧ್ಯಾಪಕಿ ಮತ್ತು ಕ್ಲಿನಿಕಲ್ ಪ್ರಾಕ್ಟೀಶನರ್ ಆಗಿದ್ದು, 13 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ನಾನ್ ಆಲ್ಕೋಹಾಲಿಕ್ ಸ್ಟೀಟೊಹೆಪಟೈಟಿಸ್ ವಿಶೇಷತೆಯಲ್ಲಿ ಪಿಎಚ್‌ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇವರು ಪೌಷ್ಟಿಕಾಂಶ ಮತ್ತು ಆರೋಗ್ಯ ಶಿಕ್ಷಣದಲ್ಲಿ ಡಿಪ್ಲೊಮಾ ಹೊಂದಿದ್ದು, ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯ ಪ್ರಚಾರದಲ್ಲಿ ಪೌಷ್ಟಿಕಾಂಶದ ಪಾತ್ರದ ಹಲವು ಶಿಬಿರಗಳನ್ನು ನಡೆಸಿದ್ದಾರೆ. ಯೋಗ ಬೋಧಕ ಪ್ರಮಾಣೀಕರಣದ ಸರ್ಟಿಫಿಕೇಟ್ ಕೂಡ ಇವರು ಪಡೆದಿದ್ದು, ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಮಹತ್ವ ಮತ್ತು ರೋಗ ತಡೆಗಟ್ಟುವ ಕುರಿತು ಹಲವು ಅಮೂಲ್ಯ ಕಾರ್ಯಗಾರಗಳನ್ನು ನಡೆಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಶೈಕ್ಷಣಿಕ ವೃತ್ತಿಜೀವನದ ಉದ್ದಕ್ಕೂ ನನ್ನನ್ನು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಮತ್ತು ಹಲವು ಸಂಶೋಧನಾ ಯೋಜನೆಗಳಿಗೆ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸಿದ್ದೇನೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವ ಹಲವು ಕಾರ್ಯಾಗಾರಗಳನ್ನು ನಡೆಸಿದ್ದೇನೆ. ಶಿಕ್ಷಕಿಯಾಗಿ ಮತ್ತು ವೈದ್ಯರಾಗಿ ಶಿಕ್ಷಣ ಹಾಗೂ ಸಂಶೋಧನೆಯ ಅಂತರವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ಗುಣಮಟ್ಟದ ರೋಗಿಯ ಆರೈಕೆಗೆ ಕೊಡುಗೆ ನೀಡುವಾಗ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ಕೃಷ್ಟಗೊಳಿಸುವ ಅನುಭವ ದೊರೆಯುತ್ತದೆ. ಈ ನಿಟ್ಟಿನಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೇನೆ. ಹತ್ತಾರು ಸಮ್ಮೇಳನಗಳಲ್ಲಿ ಪ್ರಬಂಧವನ್ನು ಸಹ ಮಂಡಿಸಿದ್ದೇನೆ. ಆರೋಗ್ಯ ಜಾಗೃತಿಯ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಪತ್ರಿಕೆಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನನ್ನ ಅನೇಕ ಲೇಖನಗಳು ಸಹ ಪ್ರಕಟಗೊಂಡಿವೆ ಎಂದು ಮಾಹಿತಿ ನೀಡಿದರು.














