ಬೆಂಗಳೂರು: ಕೆಪಿಸಿಸಿ ಮಹಿಳಾ ಮುಖಂಡೆ ಪವಿತ್ರಾಗೌಡ ಸರ್ಕಾರಿ ಕೆಲಸ ಕೊಡಿಸುವುದಾಗಿ 24 ಲಕ್ಷ ರೂ. ವಂಚಿಸಿದ್ದಾರೆ ಎಂದು ಸಂತ್ರಸ್ತೆ ಪುಷ್ಪಾ ಮತ್ತು ಶೋಭಾ ಎನ್ನುವವರು ಜಂಟಿಯಾಗಿ ಆರೋಪಿಸಿದರು.
ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಸರ್ಕಾರ ಮಟ್ಟದಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರು ಪರಿಚಯವಿದ್ದಾರೆ. ಇವರ ಸಹಾಯದಿಂದ ಅನೇಕರಿಗೆ ಸರ್ಕಾರಿ ಕೆಲಸ ಕೊಡಿಸಿದ್ದೇನೆ. ನೀನೂ 30 ಲಕ್ಷ ರೂ ನೀಡಿದರೇ ನಿಂಗೂ ಡಿ ಗ್ರೂಪ್ ನೌಕರಿ ಕೊಡಿಸುತ್ತೇನೆಂದು ನಂಬಿಸಿ, 24 ಲಕ್ಷ ರೂ. ಪಡೆದಿದ್ದರು. ಇದೀಗ ಕೆಲಸವೂ ಇಲ್ಲ. ದುಡ್ಡೂ ಕೊಡದೇ ಮೋಸ ಮಾಡಿದ್ದಾರೆ ಎಂದು ಪುಷ್ಪಾ ದೂರಿದರು.
ಕೊಟ್ಟಿರುವ ಹಣ ಹಿಂದಿರುಗಿಸುವಂತೆ ಕೇಳಿದಾಗ ಮನೆಗೆ ಕರೆದು ನನ್ನಲ್ಲಿ ಇರುವ ಎಲ್ಲ ಸಾಕ್ಷಿಗಳನ್ನು ನಾಶ ಪಡಿಸಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವಂಚನೆಯ ದೂರನ್ನು ಸಿಸಿಬಿ ಗೆ ನೀಡಿದ್ದೆ. ಇದಾದ ಬಳಿಕ 10 ಲಕ್ಷ ರೂ. ಹಿಂದಿರುಗಿಸಿದ್ದು, ಇನ್ನೂ 14 ಲಕ್ಷ ರೂ ನೀಡಬೇಕಾಗಿದೆ. ಈ ರೀತಿಯ ಮೋಸ ಯಾರಿಗೂ ಆಗಬಾರದು ಎಂದು ಹೇಳಿದರು.















