ಬೆಂಗಳೂರು: ಪಶುವೈದ್ಯಕೀಯ ಬೋಧಕರಿಗೆ ನೀಡಲಾಗುತ್ತಿದ್ದ ನಾನ್ ಪ್ರಾಕ್ಟಿಸಿಂಗ್ ಅಲೋವೆನ್ಸ್ ಅನ್ನು ಸರ್ಕಾರ ಸ್ಥಗಿತಗೊಳಿಸಿರುವ ಕ್ರಮಕ್ಕೆ ಹೆಬ್ಬಾಳ ಬಳಿಯಿರುವ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ಈ ಕುರಿತು ಪ್ರಾಧ್ಯಾಪಕ ಟಿ.ಎನ್ ಕೃಷ್ಣಮೂರ್ತಿ ಮಾತನಾಡಿ, ಕಳೆದ ಏಳು ವರ್ಷಗಳಿಂದ ನಿಯಮಾನುಸಾರವಾಗಿ ಪಾವತಿಯಾಗುತ್ತಿದ್ದ ಎನ್‌ಪಿಎ ಭತ್ಯೆಯನ್ನು ಏಕಾಏಕಿ ನಿಲ್ಲಿಸಿರುವುದು ಶಿಕ್ಷಕರ ಹಿತರಕ್ಷಣೆಗೆ ವಿರುದ್ಧವಾಗಿದೆ. ಎನ್‌ಪಿಎ ಭತ್ಯೆಯು ಪಶುವೈದ್ಯಕೀಯ ಬೋಧಕರು ಖಾಸಗಿ ಪ್ರಾಕ್ಟೀಸ್ ಮಾಡುವುದನ್ನು ತಡೆದು, ತಮ್ಮ ಸಂಪೂರ್ಣ ಸಮಯವನ್ನು ಬೋಧನೆ ಮತ್ತು ಸಂಶೋಧನೆಗೆ ಮೀಸಲಿಡುವ ಉದ್ದೇಶದಿಂದ ನೀಡಲಾಗುತ್ತದೆ. ಏಳನೇ ವೇತನ ಆಯೋಗದ ನಿಯಮಗಳಂತೆ ಮೂಲ ವೇತನದ ಶೇ. 20ರಷ್ಟು ಭತ್ಯೆ ನೀಡುವುದು ಕಾನೂನುಬದ್ಧವಾಗಿದ್ದು, ಬೋಧನಾ ಗುಣಮಟ್ಟ ಕಾಪಾಡಲು ಇದು ಅವಶ್ಯಕವಾಗಿದೆ ಎಂದರು.
2018-19ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಎನ್‌ಪಿಎ ಅನುಷ್ಠಾನಗೊಳಿಸಲಾಗಿದ್ದು, ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿತ್ತು. ಕೇಂದ್ರ ಸರಕಾರ, ಐಸಿಎಆರ್ ಹಾಗೂ ವೆಟರ್‌ನೆರಿ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಪ್ರಕಾರವೂ ಈ ಭತ್ಯೆ ಮಾನ್ಯವಾಗಿದೆ. ಆದರೆ ಏ.21 ರಂದು ಸರ್ಕಾರ ಹೊರಡಿಸಿದ ನಿರ್ದೇಶನದ ಮೂಲಕ ಅದನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎನ್‌ಪಿಎ ಸ್ಥಗಿತಗೊಳಿಸಿರುವುದನ್ನು ಹಿಂಪಡೆಯುವಂತೆ ಏ.27ರಂದು ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ, ಎನ್‌ಪಿಎ ಸಮೇತ ಬಾಕಿ ಇರುವ ಎರಡು ತಿಂಗಳ ಸಂಬಳವನ್ನು ಪಾವತಿಸುವವರೆಗೂ ಅರ್ನಿದಿಷ್ಟ ಅವಧಿವರೆಗೆ ವಿಶ್ವವಿದ್ಯಾಲಯದ ಎಲ್ಲಾ ಆವರಣಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ನಗರದ ಪಶುವೈದ್ಯಕೀಯ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಡಾ.ಧನಲಕ್ಷ್ಮಿ ಮಾತನಾಡಿ, ರಾಜ್ಯದ ಏಳು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಶಿಕ್ಷಕರಿಂದ ಕೆಲಸಕ್ಕೆ ಗೈರು ಹಾಜರಿ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ. ಕಳೆದರಡು ತಿಂಗಳಿನಿಂದ ಸಂಬಳ ಬಂದಿಲ್ಲ. ಎನ್‌ಪಿಎ ಸಂಬಳ ಬರುವವರೆಗೂ ನಮ್ಮ ಹೋರಾಟ ಮುಂದುವರೆಯುವುದು ಎಂದು ತಿಳಿಸಿದರು.














