ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಗರದ ಮಿಷನ್ ರಸ್ತೆಯಲ್ಲಿ ಇದೇ ಬುಧವಾರ ವಿದ್ಯುಕ್ತವಾಗಿ ಆರಂಭವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೊಸ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದು, ಖ್ಯಾತ ಹೃದಯ ತಜ್ಞ ಹಾಗೂ ಲೋಕಸಭಾ ಸದಸ್ಯ ಡಾ. ಸಿ ಎನ್ ಮಂಜುನಾಥ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ ಸಿ ಮೋಹನ್, ಖ್ಯಾತ ನಟ ರಮೇಶ್ ಅರವಿಂದ್, ರಾಜ್ಯ ಪೋಲಿಸ್ ಇಲಾಖೆ ಮಹಾ ನಿರ್ದೇಶಕ ಡಾ. ಎಂ ಎ ಸಲೀಂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎನ್ ಯು ಸಮೂಹದ ಆಸ್ಪತ್ರೆಗಳಲ್ಲಿ ಕಿಡ್ನಿ ಕಸಿ, ಯುರಾಲಜಿ, ನೆಫ್ರಾಲಜಿ ಹಾಗೂ ಫರ್ಟಿಲಿಟಿ ಚಿಕಿತ್ಸೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನೀಡಲಾಗುತ್ತಿದೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ಎನ್ಯು ಸಮೂಹದ ಆಸ್ಪತ್ರೆಗಳು ಜನಾನುರಾಗಿ ಎನಿಸಿವೆ.
ತಪಾಸಣೆ ಮತ್ತು ಚಿಕಿತ್ಸೆ ಎರಡರಲ್ಲೂ ವಿಶ್ವಾಸಾರ್ಹತೆ ಪಡೆದಿರುವ ಈ ಸಮೂಹ ಆರೋಗ್ಯ ಸೇವಾ ಸಂಸ್ಥೆ, ಅತೀ ವೇಗವಾಗಿ ಬೆಳೆಯುತ್ತಿರುವ ಆಸ್ಪತ್ರೆಗಳಲ್ಲಿ ಒಂದಾಗಿದೆ. ಬುಧವಾರ ಬೆಳಿಗ್ಗೆ ಹತ್ತು ಗಂಟೆಗೆ ಹಿರಿಯ ವೈದ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ಈ ನೂತನ ಆಸ್ಪತ್ರೆ ಜನರ ಸೇವೆಗೆ ಸಮರ್ಪಣೆಯಾಗಲಿದೆ.













