ಆದಿಚುಂಚನಗಿರಿ (ನಾಗಮಂಗಲ): 2028 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಮಂಗಳವಾರ ಆದಿಚುಂಚನಗಿರಿ ಮಠದ ಗುರು ಭೈರವೈಕ್ಯ ಮಂದಿರ ಉದ್ಘಾಟನೆಯ ಸಿದ್ಧತೆ ಬಗ್ಗೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಜೆಡಿಎಸ್ ಕೂಡ ಜೊತೆಗೆ ಇರಲಿದೆ. ಈಗಾಗಲೇ ಸಂಸತ್ತಿನಲ್ಲೂ ಬಿಜೆಪಿ ಜೊತೆಗೆ ಜೆಡಿಎಸ್ ಇದೆ. ಯಾರು ಮುಖ್ಯಮಂತ್ರಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಮೊದಲಾದ ನಾಯಕರು ತೀರ್ಮಾನಿಸಲಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಅನೇಕರಿದ್ದಾರೆ. ಪಕ್ಷದ ಆಶೀರ್ವಾದವಿದ್ದರೆ ನಾನು ಕೂಡ ಸಿಎಂ ಆಗಬಹುದು. ಈಗ ಅವೆಲ್ಲಕ್ಕಿಂತಲೂ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದು ಮುಖ್ಯವಾಗುತ್ತದೆ. ಇದಕ್ಕಾಗಿ ನಾವು ಹೋರಾಟಗಳನ್ನು ಮುಂದುವರಿಸುತ್ತೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ನವೆಂಬರ್‌ನಲ್ಲಿ ಆಗಬೇಕಿತ್ತು. ಈಗ ಆ ದಿನಾಂಕ ಮುಗಿದುಹೋಗಿದೆ. ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ಜಗಳದಲ್ಲೇ ಸರ್ಕಾರ ಸತ್ತುಹೋಗಿದೆ. ಪಕ್ಷದ ಅಧ್ಯಕ್ಷರಿಗೆ ಗೌರವ ಇದ್ದಿದ್ದರೆ ಶಾಸಕರು ದೆಹಲಿಗೆ ಹೋಗುತ್ತಿರಲಿಲ್ಲ. ಡಿ.ಕೆ.ಶಿವಕುಮಾರ್ ಧ್ವನಿಗೆ ಮೂರು ಪೈಸೆಯ ಬೆಲೆಯನ್ನು ಶಾಸಕರು ನೀಡುತ್ತಿಲ್ಲ. ಅವರ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ. ಕಾಂಗ್ರೆಸ್‌ನಲ್ಲಿ ಸಿಎಂ ಆಸೆ ಇಟ್ಟುಕೊಂಡವರು ಜಗಳವಾಡುತ್ತಿದ್ದಾರೆ. ಈ ನಡುವೆ ರಾಜ್ಯದ ಅಭಿವೃದ್ಧಿ ನಡೆಯುತ್ತಿಲ್ಲ. ಹಿಂದೆ ಜನತಾದಳವನ್ನು ಜಗಳಗಳ ಪಾರ್ಟಿ ಎಂದು ಕರೆಯುತ್ತಿದ್ದರು. ಅದೇ ರೀತಿ ಈಗ ಕಾಂಗ್ರೆಸ್ ಜಗಳಗಳ ಪಾರ್ಟಿ ಆಗಿದೆ ಎಂದು ವ್ಯಂಗ್ಯವಾಡಿದರು.
ಮಂದಿರ ಉದ್ಘಾಟನೆ:
ಆದಿಚುಂಚನಗಿರಿ ಸಂಸ್ಥಾನದ ಗುರು ಭೈರವೈಕ್ಯ ಮಂದಿರದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇಲ್ಲಿ ಉತ್ತಮ ತಯಾರಿ ನಡೆಯುತ್ತಿದ್ದು, ಸಾವಿರಾರು ಜನರು ಕೂರುವ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಮಠದ ಬಗ್ಗೆ ಅಪಾರ ಭಕ್ತಿ ಭಾವವಿದೆ. ಈ ಹಿಂದೆಯೂ ಅವರು ಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಂದಿರವನ್ನು ಬಹಳ ಆಕರ್ಷಕ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ನಾನು ಕೂಡ ಕಾರ್ಯಕ್ರಮದಲ್ಲಿ ಪಾಲೊಳ್ಳಲು ಅವಕಾಶ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೊದಲಿಗೆ ಭೈರವೈಕ್ಯ ದೇವರ ಪೂಜೆಯಲ್ಲಿ ಪಾಲ್ಗೊಂಡು, ನಂತರ ಮಂದಿರ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಆರ್.ಅಶೋಕ್ ತಿಳಿಸಿದರು.














