ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾಲಾತೀತ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸಂವಿಧಾನ ಕರ್ತೃ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಕಾಲಕ್ಕೆ ಸೀಮಿತವಾದ ನಾಯಕರಿರುತ್ತಾರೆ. ಆದರೆ, ಅಂಬೇಡ್ಕರ್ ಅವರು ಹಾಗಲ್ಲ. ಮಹಾನ್ ಚಿಂತಕರು ಸದಾ ಜೀವಂತರಾಗಿರುತ್ತಾರೆ ಅಂಥವರಲ್ಲಿ ಡಾ.ಅಂಬೇಡ್ಕರ್ ಅವರೂ ಒಬ್ಬರು ಎಂದರು.
ಬುದ್ಧನ ಪ್ರೇರಣೆ, ಬಸವಣ್ಣನ ಸಮಾನತೆ ಇವೆರಡನ್ನೂ ಪಡೆದವರು ಡಾ. ಅಂಬೇಡ್ಕರ್. ಭಾರತಕ್ಕೆ ಸಮಾನತೆ, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವ ಶ್ರೇಷ್ಠ ವ್ಯಕ್ತಿ ಅವರು. ಸರ್ವಸ್ಪರ್ಶಿ, ಸರ್ವವ್ಯಾಪ್ತಿಯ ಸಂವಿಧಾನವನ್ನು ಕೊಟ್ಟಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಮಾನವೀಯತೆ ಆಧಾರದಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಬಲ ನೀಡುವ ಸಂವಿಧಾನವನ್ನು ನೀಡಿದ್ದಾರೆ. ಆದರೆ ಅಂಬೇಡ್ಕರರ ಹೆಸರಿನಲ್ಲಿ ನಿರಂತರ ಅನ್ಯಾಯ ಮಾಡುವವರ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರರ ಜನ್ಮದಿನವನ್ನು ದಲಿತರು ಮಾತ್ರ ಕೊಂಡಾಡುತ್ತಿಲ್ಲ. ಅಂಬೇಡ್ಕರ್ ಅವರು ನಮ್ಮ ಅಸ್ಮಿತೆ. ನಮ್ಮ ಬೆಳಕು, ನಮಗೆ ದಾರಿದೀಪ ಎಂದು ಕೊಂಡಾಡುತ್ತೇವೆ. ಬಾಬಾಸಾಹೇಬರನ್ನು ಗೌರವಿಸುವಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.
ಬಿಜೆಪಿ ಮೀಸಲಾತಿ ವಿರೋಧಿ, ಮೀಸಲಾತಿಯನ್ನು ಕಿತ್ತು ಬಿಡುತ್ತಾರೆ ಎಂದು ತಪ್ಪು ಮಾಹಿತಿ ಹರಡುತ್ತಾರೆ. ಮೀಸಲಾತಿ ರದ್ದು ಮಾಡುವುದಾದರೆ ನಾವು ಇಷ್ಟು ದಿನ ಯಾಕೆ ಕಾಯಬೇಕಿತ್ತು ಎಂದು ಕೇಳಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಮತ್ತು ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಮಹಂತೇಶ್ ಕವಟಗಿಮಠ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ಜಯಂತ್ಯುತ್ಸವ ರಾಷ್ಟ್ರೀಯ ಸಮಿತಿ ಸದಸ್ಯ ಜಗದೀಶ್ ಹಿರೇಮನಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಮಾಜಿ ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.















