ಬೆಂಗಳೂರು: ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕೆಂಬ ತೀರ್ಮಾನವು ಸುವರ್ಣಾಕ್ಷರದಲ್ಲಿ ಬರೆದಿಡತಕ್ಕ ಮಹತ್ವದ ಕ್ಷಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.
ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ನಾರಿ ಶಕ್ತಿ ವಂದನ ಸಮ್ಮೇಳನದ ನೇರಪ್ರಸಾರವನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು. ಈ ದೇಶದ ನಾರಿಶಕ್ತಿ ಬಗ್ಗೆ ಅಚಲವಾದ ವಿಶ್ವಾಸವನ್ನು ನರೇಂದ್ರ ಮೋದಿಜಿ ಇಟ್ಟುಕೊಂಡಿದ್ದಾರೆ ಎಂದು ನುಡಿದರು. ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಯ ಪಾತ್ರ ಮಹತ್ವವಾದುದು ಎಂಬುದನ್ನು ಈ ದೇಶ ಮಾತ್ರವಲ್ಲದೇ ಜಗತ್ತಿಗೇ ಸಾರಿ ಸಾರಿ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಭಾರತವು 2047ನೇ ಇಸವಿಗೆ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತನೆ ಹೊಂದಲು ಈ ದೇಶದ ಮಹಿಳೆಯರ ಪಾತ್ರ ಬಹಳ ಮಹತ್ವವಾದುದು. ಹಾಗಾಗಿಯೇ ಈ ದೇಶದ ಮಹಿಳೆಯರ ಹಲವು ದಶಕಗಳ ಕನಸು ಇವತ್ತು ನನಸಾಗುತ್ತಿದೆ. ಮಹಿಳಾ ಮೀಸಲಾತಿಯ ಅನುಷ್ಠಾನದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪಾತ್ರ ಇರುವುದು ಎಂದು ಪ್ರಧಾನಿಯವರು ಹೇಳಿದ್ದಾರೆ ಎಂದು ವಿವರಿಸಿದರು.
ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ತೀರ್ಮಾನವು ಮಹತ್ವದ್ದು. ಪ್ರಧಾನಿಯವರ ದೃಢಸಂಕಲ್ಪದ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸಬೇಕು ಎಂದರು. ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಮತ್ತು ಇತರ ಪ್ರಮುಖರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.















