ಬೆಳಗಾವಿ: ನಗರದ ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಗದ್ದಲ ಉಂಟಾಗಿದ್ದು, ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆತಂಕದಿಂದ ಹೆಚ್ಚಾಗಿ ಖರೀದಿಸುತ್ತಿರುವುದು ಕಂಡು ಬರುತ್ತಿದೆ. ಈ ಸಂಬಂಧ ಜಿಲ್ಲಾಡಳಿತ ಜನರಿಗೆ ಭಯ ಪಡುವ ಅಗತ್ಯವಿಲ್ಲ ಎನ್ನುವ ಸಂದೇಶವನ್ನು ರವಾನಿಸಿದೆ.
ಜಿಲ್ಲಾಡಳಿತವು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು. ಅವರುಗಳಿಂದ ಸಿಕ್ಕ ಅಂಕಿ, ಅಂಶಗಳು ಮತ್ತು ಇತರ ಮಾಹಿತಿಯ ಪ್ರಕಾರ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ, ಸಮರ್ಪಕ ಪ್ರಮಾಣದಲ್ಲಿ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದೆ.
ನಾಗರಿಕರು ಅನಾವಶ್ಯಕವಾಗಿ ಆತಂಕದಿಂದ ಇಂಧನ ಸಂಗ್ರಹ ಮಾಡಬಾರದು. ಇಂತಹ ವರ್ತನೆಗಳು ಸರಬರಾಜು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲಿದೆ. ಹೀಗಾಗಿ ಪೆಟ್ರೋಲಿಯಂ ಕಾಯ್ದೆ 1934 ಹಾಗೂ ಪೆಟ್ರೋಲಿಯಂ ನಿಯಮಗಳು 2002 ಪ್ರಕಾರ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಸಂಗ್ರಹಿಸುವುದರಿಂದ ಗಂಭೀರ ಸುರಕ್ಷತಾ ಅಪಾಯ ಕೂಡ ಉಂಟಾಗುವ ಕಾರಣಕ್ಕೆ ಬೆಳಗಾವಿ ನಗರದಲ್ಲಿನ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪೆಟ್ರೋಲ್ ಮಾರಾಟ ಮಾಡಬಾರದು. ನಿಯಮಗಳನ್ನು ಉಲ್ಲಂಘಿಸುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದೆ.
ನಾಗರಿಕರು ಪೆಟ್ರೋಲ್ ಬಂಕ್‌ಗಳಲ್ಲಿ ಶಿಸ್ತಿನಿಂದ ನಡೆದುಕೊಳ್ಳಬೇಕು ಹಾಗೂ ಪಂಪ್ ಸಿಬ್ಬಂದಿ ಮತ್ತು ಇತರ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಡಳಿತ ಕೋರಿದೆ.















