ಬೆಂಗಳೂರು: ಕಳೆದ 28 ವರ್ಷಗಳಿಂದ ನಿರಂತರವಾಗಿ ಸಂಗೀತ ಮತ್ತು ಕಲೆಗೆ ಸೇವೆ ಸಲ್ಲಿಸುತ್ತಿರುವ ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್ ಕಲಾ ರಂಗದಲ್ಲಿ ತನ್ನದೇ ಆದ ವಿಶಿಷ್ಠ ಮುದ್ರೆಯನ್ನು ಮೂಡಿಸಿದೆ ಎಂದು ಖ್ಯಾತ ವೇಣುವಾದಕ, ವಂಶಿ ಸಂಗೀತ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿದ್ವಾನ್ ಬಿ.ಕೆ. ಅನಂತ್‌ರಾಮ್ ತಿಳಿಸಿದರು.
ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ರಾಜ್ಯ ಸಂಗೀತ ವಿದ್ವಾನ್ ದಿವಂಗತ ವಿದುಷಿ ಎ ರಾಜಮ್ಮ ಕೇಶವ ಮೂರ್ತಿ ಮತ್ತು ಬಿ.ಎಂ ಕೇಶವಮೂರ್ತಿ ಅವರ ಸ್ಮರಣಾರ್ಥ ಹಾಗೂ ನವರಾತ್ರಿ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿದ್ವಾನ್ ಬಿ.ಕೆ. ಅನಂತ್‌ರಾಮ್ ಅವರು, ಹಲವಾರು ವಿದ್ಯಾರ್ಥಿಗಳು ಮತ್ತು ಕಲಾಪ್ರೇಮಿಗಳ ಸಹಕಾರದಿಂದ ಸಂಸ್ಥೆಯು ಮಹತ್ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಇದುವರೆಗೆ ಸುಮಾರು 3,000ಕ್ಕೂ ಅಧಿಕ ಯುವ ಹಾಗೂ ಹಿರಿಯ ಕಲಾವಿದರಿಗೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತಗಾರರಿಗೆ ಈ ಸಂಸ್ಥೆಯು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಎಂದರು.
ಕೇವಲ ಸಂಗೀತಗಾರರಷ್ಟೇ ಅಲ್ಲದೆ, ಕಲೆಗೆ ಬೆಂಬಲ ನೀಡುವ ವಿವಿಧ ಕ್ಷೇತ್ರಗಳ ಶಿಕ್ಷಣತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರುತಿಸಿ ಪ್ರತಿವರ್ಷ ‘ವಂಶಿ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಇದುವರೆಗೆ ನೂರಕ್ಕೂ ಹೆಚ್ಚು ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ಅಂತಾರಾಜ್ಯ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಚೆನ್ನೈ ಸೇರಿದಂತೆ ವಿವಿಧ ಊರುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ನಮ್ಮ ರಾಜ್ಯದ ಕಲಾವಿದರನ್ನು ಅಲ್ಲಿಗೆ ಕರೆದೊಯ್ದು ಸ್ಥಳೀಯ ಕಲಾವಿದರೊಂದಿಗೆ ಜುಗಲ್ಬಂಧಿ ಕಾರ್ಯಕ್ರಮಗಳನ್ನು ಟ್ರಸ್ಟ್ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಸಂಸ್ಥಾಪಕರು ಮತ್ತು ರಾಜ್ಯ ಸಂಗೀತ ವಿದ್ವಾನ್ ದಿವಂಗತ ಎ. ರಾಜಮ್ಮ ಕೇಶವಮೂರ್ತಿ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವರ ಜನ್ಮಶತಾಬ್ಧಿಯ ಸವಿ ನೆನಪಿಗಾಗಿ 100 ಕಾರ್ಯಕ್ರಮಗಳನ್ನು ಆಯೋಜಿಸುವ ಬೃಹತ್ ಸಂಕಲ್ಪವನ್ನು ಮಾಡಲಾಗಿದೆ. ಈಗಾಗಲೇ ಪ್ರತಿವರ್ಷ 25 ಕಾರ್ಯಕ್ರಮಗಳಂತೆ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷದ ಆಗಸ್ಟ್‌ನಲ್ಲಿ ಗುರುಪೂರ್ಣಿಮೆ ಹಾಗೂ ಹಲವು ವಿಶಿಷ್ಟ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.
ಬರುವ ನವೆಂಬರ್ 15ರಂದು ಮಲ್ಲೇಶ್ವರದ ರಾಮಮಂದಿರದಲ್ಲಿ ಕಾರ್ತಿಕ ಸಂಗೀತೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಮೇರು ಕಲಾವಿದರಾದ ಡಾ. ಸಿ. ಚೆಲುವರಾಜು ಮತ್ತು ಎನ್. ವಾಸುದೇವ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಒಟ್ಟಿನಲ್ಲಿ 2029ರ ವೇಳೆಗೆ ಒಟ್ಟು 100 ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, 2029ರ ಕೊನೆಯ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸುವ ಭವ್ಯ ವೇದಿಕೆಯನ್ನು ಸಜ್ಜುಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಮನೆಮನೆಗಳಲ್ಲಿ ಸಂಗೀತ ಸಂತ್ಸಂಗಗಳನ್ನು ಏರ್ಪಡಿಸುವ ಮೂಲಕ ಕೇಳುಗರನ್ನು ಮತ್ತು ಯುವ ಪೀಳಿಗೆಯನ್ನು ಸಂಗೀತದತ್ತ ಆಕರ್ಷಿಸುವ ಮಹತ್ವದ ಜವಾಬ್ದಾರಿಯನ್ನು ಈ ಸಂಸ್ಥೆ ವಹಿಸಿಕೊಂಡಿದೆ. ನಮ್ಮ ರಾಜ್ಯದ ಪ್ರತಿಭಾವಂತ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಮತ್ತು ಪ್ರೋತ್ಸಾಹ ಸಿಗಬೇಕು ಎನ್ನುವ ಆಶಯದೊಂದಿಗೆ ವಂಶಿ ಅಕಾಡೆಮಿ ತನ್ನ ನಿರಂತರ ಸಾಂಸ್ಕೃತಿಕ ಸೇವೆಯನ್ನು ಮುಂದುವರಿಸಲಿದೆ ಎಂದು ಬಿ.ಕೆ. ಅನಂತ್‌ರಾಮ್ ಸ್ಪಷ್ಟಪಡಿಸಿದರು.
ಈ ವೇಳೆ ಅನಂತ್‌ರಾಮ್ ಅವರ ಧರ್ಮಪತ್ನಿ ಹಾಗೂ ಸಂಸ್ಥೆಯ ಟ್ರಸ್ಟಿ ಕೆ.ಎಸ್. ಶ್ರೀಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಂಶಿ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ಸಂಗೀತ ಪ್ರಕಾರಗಳನ್ನು ಪ್ರಸ್ತುತಪಡಿಸಿದರು.














