ಖಾನಾಪುರ: ತಾಲೂಕಿನ 3 ಗ್ರಾಮ ಪಂಚಾಯಿತಿಗಳಿಗೆ ಆನಂದ ಬಿಂಗೆ ಎಂಬುವರು ಒಬ್ಬರೇ ಪಿಡಿಒ ಆಗಿ ಕೆಲಸ ಮಾಡುತ್ತಿರುವುದು ವಿಚಿತ್ರವಾದರೂ ಸತ್ಯವಾಗಿದೆ. ಗೋಲ್ಯಾಳಿ, ಅಮಟೆ ಮತ್ತು ಜಾಂಬೋಟಿ ಈ ಮೂರೂ ಗ್ರಾಮ ಪಂಚಾಯಿತಿಗಳಿಗೆ ಈ ಆನಂದ ಬಿಂಗೆ ಅವರೊಬ್ಬರೇ ಸರ್ವಶಕ್ತ ಸಕಲ ಅಧಿಕಾರಿಯಾಗಿದ್ದಾರೆ.
ಖಾನಾಪುರದಿಂದ 40 ಕಿಮೀ ದೂರದಲ್ಲಿರುವ ಗೋಲ್ಯಾಳಿ ಗ್ರಾಮ ಪಂಚಾಯಿತಿ, 25 ಕಿಮೀ ದೂರದಲ್ಲಿರುವ ಅಮಟೆ ಗ್ರಾಮ ಪಂಚಾಯಿತಿ ಹಾಗೂ 20 ಕಿಮೀ ದೂರದಲ್ಲಿರುವ ಜಾಂಬೋಟಿ ಗ್ರಾಮ ಪಂಚಾಯಿತಿಯ ಜವಾಬ್ದಾರಿಗಳನ್ನು ಈ ಒಬ್ಬರೇ ಪಿಡಿಒ ನಿಭಾಯಿಸುವುದಾದರೂ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ಅಧಿಕಾರಿಯು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವುದು ಕಡ್ಡಾಯ. ಆದರೆ ಸದರಿ ಪಿಡಿಒ ಆನಂದ ಅವರು ಬೆಳಗಾವಿಯಲ್ಲಿ ಇದ್ದುಕೊಂಡೇ ಈ ಮೂರೂ ಪಂಚಾಯಿತಿಗಳ ಜವಾಬ್ದಾರಿ ನಿರ್ವಹಿಸುತ್ತಿರುವುದು ಪವಾಡವೇ ಸರಿ. ಇವರು ಈ ಹಿಂದೆ ಕೋಟಗಾಳಿ ಹಾಗೂ ನಂದಗಡ ಗ್ರಾಮ ಪಂಚಾಯಿತಿಗಳ ಪಿಡಿಒ ಆಗಿ ಕೆಲಸ ಮಾಡಿದ್ದಾರೆ. ಆಗಿನ ಅವಧಿಯಲ್ಲಿ ಅವರು ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂಬ ಸಾಕಷ್ಟು ಆರೋಪಗಳು ಇವೆ. ಇಷ್ಟಾದರೂ ಈ ಅಧಿಕಾರಿಯ ಯಾವುದೇ ಕ್ರಮ ಆಗಿಲ್ಲ.
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಖಾನಾಪುರ ತಾಪಂ ಹಾಗೂ ಬೆಳಗಾವಿ ಜಿಪಂನ ಹಿರಿಯ ಅಧಿಕಾರಿಗಳು ಸದರಿ ಆನಂದ ಬಿಂಗೆ ಅವರನ್ನು ಮೂರು ಗ್ರಾಪಂಗಳಿಗೆ ನೇಮಿಸಿರುವುದು ಹಲವಾರು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಮೇಲಧಿಕಾರಿಗಳಿಗೆ ಮಂತ್ಲಿ ಕೊಟ್ಟರೆ ಏನು ಬೇಕಾದರೂ ಮಾಡಬಹುದು, ಎಲ್ಲಿಗೆ ಬೇಕಾದರೂ ಡೆಪುಟೇಶನ್ ನೀಡಬಹುದು ಎಂಬುದು ಬಹಿರಂಗ ಸತ್ಯವಾಗಿದೆ. ಈ ಪ್ರಕರಣದಲ್ಲಿಯೂ ಹಾಗೆಯೇ ಆಗುತ್ತಿದೆಯಾ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಆದರೆ ಉತ್ತರ ಕೊಡಬೇಕಿರುವ ಇಒ ಮತ್ತು ಸಿಇಒ ಮೌನಕ್ಕೆ ಶರಣಾಗಿದ್ದಾರೆ.















