ಬೆಳಗಾವಿ: ಬೆಳಗಾವಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಬ್ರಹ್ಮಾಂಡ ಭ್ರಷ್ಟಾಚಾರಗಳು ಕೇಳಿ ಬಂದಿವೆ. ಬೆಳಗಾವಿ ಭೂದಾಖಲೆಗಳ ಸಹಾಯಕ ನಿರ್ದೇಶಕರಾಗಿರುವ ಅಜಯ ಹಾದಿಮನಿ ಇವರು ಕಂಡ ಕಂಡಲ್ಲಿ ಉಣ್ಣುವ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಸದರಿ ಅಧಿಕಾರಿ ಅಜಯ ಇವರು ಒಂದು ಎಕರೆ ಕೆಜಿಪಿ ಮಾಡಲು 5 ಲಕ್ಷ ರೂಪಾಯಿ ಡಿಮಾಂಡ್ ಮಾಡುತ್ತಾರೆ ಎಂದು ನೊಂದವರು ಹೇಳುತ್ತಿದ್ದಾರೆ. ಹಣ ನೀಡಿದರೆ ಮಾತ್ರ ಕೆಜಿಪಿ.. ಇಲ್ಲದಿದ್ದರೆ ಫೈಲ್ ರಿಜೆಕ್ಟ್.. ಇದು ಅಜಯ ಕಾರ್ಯವೈಖರಿಯಾಗಿ ಕಂಡುಬರುತ್ತಿದೆ.
ಏರಿಯಾದಲ್ಲಿನ ಪ್ಲಾಟ್ ಗಳ ಮೌಲ್ಯಕ್ಕೆ ಅನುಸಾರವಾಗಿ ಇವರು ಲಂಚದ ವ್ಯವಹಾರ ಕುದುರಿಸುತ್ತಾರೆ ಎಂಬುದು ಕಂಡು ಬರುತ್ತಿದೆ. ತಮ್ಮ ಸರ್ಕಾರಿ ಸರ್ವೇಯರ್ ಗಳು ಹಾಗೂ ಖಾಸಗಿ ಸರ್ವೇಯರ್ ಗಳಿಂದಲೂ ರಾಜಾರೋಷವಾಗಿ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಜನತೆ ಹಲವಾರು ಬಾರಿ ದೂರು ನೀಡಿದ್ದಾರೆ.
ಲೋಕಾಯುಕ್ತರ ಕಚೇರಿ ಪಕ್ಕದಲ್ಲಿದ್ದರೂ ಡೋಂಟ್ ಕೇರ್:
ಸರ್ಕಾರಿ ಭೂದಾಖಲೆ ಇಲಾಖೆ ಲೋಕಾಯುಕ್ತರ ಕಚೇರಿ ಪಕ್ಕದಲ್ಲೇ ಇದ್ದರೂ ಕೂಡ ಈ ಅಧಿಕಾರಿ ಅಜಯ ಅವರಿಗೆ ಯಾವುದೇ ಹೆದರಿಕೆ ಇಲ್ಲ. ಈತನಿಂದ ನೊಂದ ಜನ ಬೆಂಗಳೂರಿನಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಬಲೆಗೆ ಕೆಡವಿದಂತೆ ಬೆಳಗಾವಿಯಲ್ಲೂ ಕಾರ್ಯಾಚರಣೆ ನಡೆಯಲಿ ಎಂದು ಆಗ್ರಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಜಾ ನೆರಳು ಪತ್ರಿಕೆಯು ಸಾಕ್ಷಿ ಸಮೇತ ಮತ್ತೊಂದು ವರದಿಯನ್ನು ನಿಮ್ಮ ಮುಂದಿಡಲಿದೆ.














