ಬೆಳಗಾವಿ: ತಾಲೂಕಿನ ಸಾಂಬ್ರಾ ಗ್ರಾಮದಲ್ಲಿರುವ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಕೃಷಿ ಜಮೀನನ್ನು ಭೂ ಸ್ವಾಧೀನ ಮಾಡಿಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡದ ಬೆಳಗಾವಿ ಉಪವಿಭಾಗಾಧಿಕಾರಿ ಸರ್ಕಾರಿ ಕಾರು ಹಾಗೂ ಕಚೇರಿಯಲ್ಲಿ ಕಂಪ್ಯೂಟರ್ ಸೀಜ್ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಕಳೆದ 2010ರಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೃಷಿ ಜಮೀನು ಭೂ ಸ್ವಾಧೀನ ಪಡೆದುಕೊಂಡ ವಿಶೇಷ ಭೂಸ್ವಾಧೀನ ಅಧಿಕಾರಿ ಇಲ್ಲಿಯವರೆಗೆ ಯಾವುದೇ ರೀತಿ ರೈತರಿಗೆ ಪರಿಹಾರ ನೀಡಿರಲಿಲ್ಲ. ಆದ್ದರಿಂದ ಬೆಳಗಾವಿ 3ನೇ ದಿವಾನಿ ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿನ ಕಂಪ್ಯೂಟರ್ ಹಾಗೂ ಸರ್ಕಾರಿ ಕಾರ್ ಅನ್ನು ಸೀಜ್ ಮಾಡಲಾಗಿದೆ.
ಕಳೆದ 16 ವರ್ಷದ ಹಿಂದೆಯೇ ಭೂ ಸ್ವಾಧೀನ ಪಡಿಸಿಕೊಂಡಿದ್ದಾರೆ. ಎರಡು ವರ್ಷದ ಹಿಂದೆಯೇ ನ್ಯಾಯಾಲಯ ಆರು ಜನ ರೈತರಿಗೆ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ ಎಂದು ನ್ಯಾಯವಾದಿ ಎಸ್.ಎಸ್.ಶೆಟ್ಟರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.















