ಬೆಂಗಳೂರು: ರಾಮಲಲಾ ಹಮ್ ಆಯೆಂಗೆ ಮಂದಿರ ವಹೀ ಬನಾಯೆಂಗೆ ಎನ್ನುವ ಘೋಷಣೆಯನ್ನು ನೀಡಿ, ಅಯೋಧ್ಯೆಯ ಶ್ರೀರಾಮನ ಮೂರ್ತಿ ಬಂಧನದಿಂದ ಪರಿಸ್ಥಿತಿಯಿಂದ ಹೊರತಂದು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದವರು ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು ಎಂದು ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ಭಾನುವಾರ ರಾತ್ರಿ ಬನಶಂಕರಿಯಲ್ಲಿರುವ ವಿದ್ಯಾಪೀಠದಲ್ಲಿ ಪೂರ್ಣಪ್ರಜ್ಞ ಪ್ರತಿಷ್ಠಾನ ವತಿಯಿಂದ ಶ್ರೀ ವಿಶ್ವೇಶತೀರ್ಥಸ್ವಾಮೀಜಿ ಅವರ 6ನೇ ಮಹಾಸಮಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಲೋಕ ಸಂಚಾರಿಗಳಾಗಿದ್ದರು. ಆದರೆ, ಕಳೆದ 6 ವರ್ಷಗಳಿಂದ ನಮ್ಮ ಮನೆ-ಮನಗಳಲ್ಲಿ ನೆಲೆಸಿ, ಸರ್ವ ವ್ಯಾಪಿಗಳಾಗಿದ್ದಾರೆ. ಮನಸ್ಸಿಗೆ ದುಗುಡ ದುಮ್ಮಾನವಾದಾಗ ಅವರನ್ನು ನೆನೆದರೆ ಬೆಳಕಿನ ರೀತಿ ಎಲ್ಲರ ಕಷ್ಟ, ಕಾರ್ಪಣ್ಯಗಳನ್ನು ದೂರ ಮಾಡುತ್ತಾರೆ ಎಂದರು.
ಕರ್ನಾಟಕ ಏಕೀಕರಣವಾದ ಸುಸಂದರ್ಭದಲ್ಲಿ ತಮ್ಮ ಸಂಕಲ್ಪದಿಂದ ಆಧ್ಯಾತ್ಮಿಕವಾಗಿ ನಾಡು ಮುಂದುವರೆಯುವ ಸಲುವಾಗಿ ಧರ್ಮ ಸಭೆಯನ್ನು ಆಯೋಜಿಸಿದ್ದರು. ತಮ್ಮ ಚೌಕಟ್ಟನ್ನು ಮೀರಿ ಧರ್ಮವನ್ನು ಪಸರಿಸುವುದು ಅವರ ದ್ಯೇಯೋದ್ದೇಶವಾಗಿತ್ತು. ತತ್ವಶಾಸ್ತ್ರ, ವೇದಾಂತ ಮತ್ತು ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬೆಳಕಾಗಿ ನಿಂತವರು ಶ್ರೀವಿಶ್ವೇಶತೀರ್ಥ ಶ್ರೀಪಾದರು ಎಂದು ತಿಳಿಸಿದರು.
ವೈಜ್ಞಾನಿಕವಾಗಿ ಎಲ್ಲರ ಮನಸ್ಸಿನಲ್ಲಿ ಮೂಡುತ್ತಿದ್ದ ಕಂದಾಚಾರಗಳನ್ನು ತೊಡೆದುಹಾಕಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದರು. ದೀನದಲಿತರ ಮಾರ್ಗದರ್ಶಕರಾಗಿ ಎಲ್ಲರಿಗೂ ಬೇಕಾಗಿ, ಎಲ್ಲರಲ್ಲೊಂದಾಗಿ ಜೀವಿಸಿದವರಾಗಿದ್ದರು. 1965 ರಲ್ಲಿ ವಿಶ್ವ ಹಿಂದು ಪರಿಷತ್(ವಿಎಚ್‌ಪಿ) ಸ್ಥಾಪನೆಯಾಗುವುದಕ್ಕೂ ಮೊದಲು ಒಬ್ಬ ಸೇನಾನಿಯಂತೆ ಸಮಾಜವನ್ನು ಒಗ್ಗೂಡಿಸುವ ಕೆಲಸದಲ್ಲಿ ವಿಶ್ವೇಶತೀರ್ಥರು ನಿರತರಾಗಿದ್ದರು. ನಂತರದ ದಿನಗಳಲ್ಲಿ ಹಿಂದುತ್ವದ ರಕ್ಷಣೆಗೆ ಶಾಶ್ವತ ಮಾರ್ಗದರ್ಶಕರಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಒಟ್ಟಿನಲ್ಲಿ ಸಮಾಜದಲ್ಲಿದ್ದ ಜಡತೆಯನ್ನು ದೂರ ಮಾಡಿದರು ಎಂದು ಹೇಳಿದರು.
ಇನ್ನೂ ಕರ್ನಾಟಕದಾದ್ಯಂತ ಹಿಂದು ಸಮಾಜ್ಯೋತ್ಸವವನ್ನು ಆಯೋಜಿಸಿ, ಮನಸ್ಸುಗಳಲ್ಲಿದ್ದ ಮೇಲು-ಕೀಳು ಎಂಬ ಭಾವನೆಗಳನ್ನು ಅಳಿಸಲು ಸದಾ ಶ್ರಮಿಸಿದರು. ಇಷ್ಟೆಲ್ಲ ಮಹಾತ್ಕಾರ್ಯಕ್ಕೆ ಸಾಕ್ಷಿಯಾದವರಲ್ಲಿ ನಾನು ಕೂಡ ಒಬ್ಬ ಎಂದು ತಿಳಿಸಿದರು.
ಸಿಖ್ಖರ ನರಮೇಧದ ನಂತರ ಸಂಭವಿಸಿದ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹತ್ಯೆಯ ಬಳಿಕ ಪಂಜಾಬಿಗರು ಬೇಸರದಿಂದ ಭಾರತದ ಬೇರ್ಪಡುವ ಪರಿಸ್ಥಿತಿ ಉಂಟಾಗಿತ್ತು. ಇಂತಹ ವಿಷಮ ಸಂದರ್ಭದಲ್ಲಿ ವಿಶ್ವೇಶತೀರ್ಥರು ಹರಿದ್ವಾರದಿಂದ ಸದ್ಭಾವನ ಯಾತ್ರೆಯ ನೇತೃತ್ವವಹಿಸಿ, ಉದ್ವಿಗ್ನಗೊಂಡಿದ್ದ ವಿವಿಧ ಊರಿಗಳಿಗೆ ಸಂಚರಿಸುವ ಮೂಲಕ ಮನಃ ಪರಿವರ್ತನೆಗೆ ಪ್ರಮುಖ ಕಾರಣರಾದರು ಎಂದು ನೆನೆದರು.
ಪೇಜಾವರ ಮಠದ ಪೀಠಾಧಿಪತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಗುರುಗಳು ಆಡಿದಂತೆ ಮಾಡಿ ತೋರಿಸಿದವರು. ಹಿಂದು ಸಮಾಜದ ನೋವು ನಲಿವುಗಳಿಗೆ ಸದಾ ಪ್ರತಿಸ್ಪಂದಿಸಿದವರು ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು, ಪಂಜಾಬ್ ರಾಜ್ಯ ಹೊತ್ತಿ ಉರಿಯುವ ಸಂದರ್ಭಗಳನ್ನು ನೋಡಿ ಕಣ್ಣೀರು ಹಾಕುವಂತಹ ಸೂಕ್ಷ್ಮ ವ್ಯಕ್ತಿತ್ವ ಅವರದ್ದಾಗಿತ್ತು. ಗುರುಗಳು ಆಡಿದಂತೆ ಮಾಡಿ ತೋರಿಸಿದವರಾಗಿದ್ದರು. ಅವರ ಬದುಕು ಬೇರೆ, ಮಾತು ಬೇರೆ ಎನ್ನುವ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಆದ್ದರಿಂದ ಇಂದು ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರು ಶ್ರೀ ಬಿ. ಭೀಮೇಶ್ವರ ಜೋಷಿ ಸೇರಿದಂತೆ ಇತರರಿದ್ದರು.














