ಬೆಂಗಳೂರು: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅವರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳವು ಸಫಲ್ ಬ್ರ್ಯಾಂಡ್ ಹೊಸ ವಿನ್ಯಾಸ ಉತ್ಪನ್ನಗಳನ್ನು ಹೊರತಂದಿದ್ದು ಪ್ರತಿ ಕನ್ನಡಿಗರ ಮನೆ-ಮನೆ ತಲುಪುವಂತಾಗಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಹಾಗೂ ಬೆಂಗಳೂರು ಮತ್ತು ಪ್ರಾದೇಶಿಕ ಒಕ್ಕೂಟಗಳ ಹುಬ್ಬಳ್ಳಿ, ರಾಯಚೂರು ಮತ್ತು ಚಿತ್ರದುರ್ಗ ಸಹಯೋಗದಲ್ಲಿ ಆಯೋಜಿಸಿದ್ದ ಸಫಲ್ ಎಣ್ಣೆ ಬ್ರ್ಯಾಂಡ್ ಉತ್ಪನ್ನಗಳ ಹೊಸ ವಿನ್ಯಾಸದ ಪ್ಯಾಕ್‌ಗಳು ಹಾಗೂ ಲೋಗೋವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಕಾರ್ಪೋರೇಟ್ ಯುಗದಲ್ಲಿ ರೈತರು ಬೆಳೆದ ಪದಾರ್ಥಗಳಿಗೆ ಉತ್ತಮ ಬೆಲೆ ಸಿಗಬೇಕು ಹಾಗೂ ಆರ್ಥಿಕವಾಗಿ ಸದೃಢವಾಗಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳವು ಸಹಕಾರ ತತ್ವದಡಿ ಸಫಲ್ ಬ್ರ್ಯಾಂಡ್‌ನ ಹೊಸ ವಿನ್ಯಾಸದ ಉತ್ಪನ್ನಗಳನ್ನು ಹೊರತಂದಿದೆ ಎಂದರು.
ನಿತ್ಯ ಅಡುಗೆ ಆಹಾರ, ಮನೆ ದೀಪ ಬೆಳಗಿಸಲು ಎಣ್ಣೆ ಅಗತ್ಯವಿದೆ. ಜತೆಗೆ ಮನುಷ್ಯನ ಉತ್ತಮ ಆರೋಗ್ಯಕ್ಕೂ ಗುಣಮಟ್ಟದ ಅಡುಗೆ ಎಣ್ಣೆ ಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಹೊರತಂದಿರುವ ಸಫಲ್ ಎಣ್ಣೆ ಉತ್ಪನ್ನಗಳು ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಮೂಲಕ ಹೊರರಾಜ್ಯಗಳಿಗೂ ವಿಸ್ತರಿಸುವಂತಾಗಲಿ.
ರಾಜಸ್ತಾನ ಹೊರತುಪಡಿಸಿ ಕರ್ನಾಟಕದಲ್ಲಿ ಹೆಚ್ಚು ಕೃಷಿ ಇದೆ. ರಾಜ್ಯದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಿ ಪ್ರೋತ್ಸಾಹಿಸಲು ಹಾಗೂ ರೈತರ ಒಳಿತಿಗಾಗಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ನಿರಂತರವಾಗಿ ಶ್ರಮಿಸುತ್ತಿವೆ ಎಂದು ಹೇಳಿದರು.
ನಂದಿನಿ, ಮೈಸೂರು ಸ್ಯಾಂಡಲ್ ಸೋಪ್ ಮಾದರಿಯಲ್ಲಿಯೇ ಸಫಲ್ ಎಣ್ಣೆ ಉತ್ಪನ್ನಗಳು ತಮ್ಮ ವಿಭಿನ್ನ ಬ್ರ್ಯಾಂಡ್ ಮೂಲಕ ಹೊಸ ಕ್ರಾಂತಿ ಸೃಷ್ಟಿಸಲಿ. ಬರಗಾಲದ ಸಂದರ್ಭದಲ್ಲಿಯೂ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 10 ಎಚ್‌ಪಿ ವರೆಗೆ ಉಚಿತವಿದ್ಯುತ್ ಪೂರೈಸುತ್ತದೆ. ಈ ನಿಟ್ಟಿನಲ್ಲಿ 30 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದೆ. ಜತೆಗೆ ಶೇಂಗಾ, ಸೂರ್ಯಕಾಂತಿ ಸೇರಿದಂತೆ ವಿವಿಧ ಎಣ್ಣೆಕಾಳುಗಳಿಗೆ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ. ರೈತರಿಗೆ ಸರಿಯಾದ ಬೆಲೆ ಸಿಗಲು ಸಹಕಾರತತ್ವವನ್ನು ಗಟ್ಟಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದರು.
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಮೀನೇಶ್ ಸಿ.ಶಾ ಮಾತನಾಡಿ, ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಿ ರೈತರ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಸಂಸ್ಥೆಯು ರಾಜ್ಯದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಸೂರ್ಯಕಾಂತಿ, ತಾಳೆಎಣ್ಣೆ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು ಇದರೊಂದಿಗೆ ರೈತರಿಗೆ ಉತ್ತಮ ಮಾರುಕಟ್ಟೆ ಬೆಂಬಲ ಹಾಗೂ ತಾಂತ್ರಿಕ ನೆರವು ಒದಗಿಸಲಾಗುತ್ತಿದೆ. ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಿ ಆಮದು ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿ, ದೇಶದಲ್ಲೇ ಎಣ್ಣೆ ಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಫಲ್ ಬ್ರ್ಯಾಂಡ್ ನೂತನ ವಿನ್ಯಾಸದ ಪ್ಯಾಕ್‌ನ ಖಾದ್ಯ ತೈಲ, ದೀಪದ ಎಣ್ಣೆ ಸೇರಿದಂತೆ 10 ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಜತೆಗೆ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಹೊಸ ಲೋಗೋವನ್ನು ಅನಾವರಣಗೊಳಿಸಲಾಯಿತು. ವಿವಿಧ ಜಿಲ್ಲೆಗಳ ಎಣ್ಣೆಕಾಳು ಬೆಳೆಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತದ ಅಧ್ಯಕ್ಷ ವೆಂಕಟರಾವ್ ನಾಡಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಹಾಮಂಡಳದ ಉಪಾಧ್ಯಕ್ಷ ಎಸ್. ಸೂಗನಗೌಡ,, ರಾಯಚೂರು ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುರೇಶ್ , ಚಿತ್ರದುರ್ಗದ ಅಧ್ಯಕ್ಷ ಉದಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು.














