ಬೆಂಗಳೂರು: ರಾಜ್ಯದ್ಯಾಂತ ವಿಬಿ-ಜಿ-ರಾಮ್-ಜಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಯ ಕೆಲಸವನ್ನು ಕಾಯಂಗೊಳಿಸಿ ಕನಿಷ್ಠ 26 ಸಾವಿರ ರೂ. ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಭೀಮಪ್ಪ ಕೆ.ಆರ್ ಮಾತನಾಡಿ, 3 ತಿಂಗಳಿಂದ ಬಾಕಿ ಇರುವ ಸಿಬ್ಬಂದಿಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. 2,500 ಜಾಬ್ ಕಾರ್ಡ್ಗೆ ಒಬ್ಬರಂತೆ ಬಿಎಫ್ಟಿ ನೇಮಕ ಮಾಡಿಕೊಂಡಿದ್ದು, ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಬೇಕು.10 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇವೆ ಕಾಯಂಗೊಳಿಸ ಬೇಕು. ಕರ್ತವ್ಯದ ವೇಳೆ ಮೃತಪಟ್ಟರೆ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬೀಮಪ್ಪ ಕೆ.ಆರ್.ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಖಾಯಂ ಆಯುಕ್ತರನ್ನು ನೇಮಕ ಮಾಡಬೇಕು, ರಿನಿವಲ್ ಪದ್ಧತಿ ಕೈಬಿಟ್ಟು ಖಾಯಂ ಸಿಬ್ಬಂದಿ ಎಂದು ಪರಿಗಣಿಸಬೇಕು. ಬಿ.ಎಫ್ ಟಿ ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿಯಾಗಿ ಘೋಷಿಸಬೇಕು. ದೂರದ ಪ್ರಯಾಣ ಪರಿಗಣಿಸಿ ಮಾಸಿಕ 5 ಸಾವಿರ ರೂಪಾಯಿ ಪ್ರಯಾಣ ಭತ್ಯೆ ಹೆಚ್ಚಳ ಮಾಡಬೇಕು ಎಂದು ವಿನಂತಿಸಿದರು.
ಉದ್ಯೋಗ ಖಾತರಿ ಕಾಯ್ದೆಯಡಿ 2005 ರಲ್ಲಿ ಯೋಜನೆ ದೇಶದ್ಯಾಂತ ಎಲ್ಲಾ ಜಿಲ್ಲೆಗಳಿಗೂ ಅನುಷ್ಠಾನಗೊಂಡ ನಂತರ ಕೃಷಿ ಕೂಲಿ ಕಾರ್ಮಿಕಾರರಿಗೆ ಕೆಲಸ ನೀಡುವ ಸಂದರ್ಭದಲ್ಲಿ ನಿರ್ವಾಹಣೆಯ ಸಮಸ್ಯೆ ಆಗಿದ್ದರಿಂದ ಭಾರತ ಸರ್ಕಾರ 2015-16 ರಲ್ಲಿ ಉದ್ಯೋಗ ಖಾತರಿ ಕೆಲಸ ಮಾಡುತ್ತಿದ್ದ ಕೂಲಿಕಾರರ ಕುಟುಂಬದಿಂದ ನಿರುದ್ಯೋಗಿ ಯುವಕ/ಯುವತಿಯರನ್ನು ಗುರುತಿಸಿ ಬಿ.ಎಫ್.ಟಿ ಗಳಾಗಿ ಆಯ್ಕೆ ಮಾಡಿ 3 ತಿಂಗಳ ತರಬೇತಿ ನೀಡಿ ಅವರಿಗೆ 2500 ಜಾಬ್ ಕಾರ್ಡ್ ಗೆ ಒಬ್ಬರಂತೆ ಕೆಲಸ ನಿರ್ವಹಿಸಲು ನೇಮಕ ಮಾಡಿಕೊಂಡಿತ್ತು. ನೇಮಕ ಮಾಡಿಕೊಂಡ ದಿನದಿಂದ ಬಿ.ಎಫ್.ಟಿ ಗಳು ಕರ್ತವ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ನಮ್ಮ ಸಮಸ್ಯೆಗಳ ಕುರಿತು ಇದುವರೆಗೂ ಅಂದಾಜು 50 ಕ್ಕೂ ಹೆಚ್ಚು ಮನವಿಗಳನ್ನು ಪ್ರಧಾನ ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖೆ ಮಂತ್ರಿಗಳಿಗೆ ನೀಡುತ್ತಾ ಬಂದಿದ್ದೇವೆ ಆದರೆ ನಾವು ಕೇಂದ್ ಅಥವಾ ರಾಜ್ಯ ಸರ್ಕಾರದ ನೌಕರರೇ ಎನ್ನುವುದನ್ನೇ ಇನ್ನೂ ಸ್ಪಷ್ಟಪಡಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಕೆ, ಪದಾಧಿಕಾರಿಗಳಾದ ನಾಗೇಶ್, ನಾರಾಯಣಸ್ವಾಮಿ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಈ ವೇಳೆ ಹಾಜರಿದ್ದರು.















