ಬೆಂಗಳೂರು: ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಬುಧವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಏರಿಸಿದ್ದಾರೆ. ನೀವು 50 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುತ್ತೀರಾ? ಅಥವಾ 1 ಲಲಕ್ಷ ಹುದ್ದೆ ಭರ್ತಿ ಮಾಡುವಿರಾ? ಎಂಬುದು ನಿಮಗೆ ಬಿಟ್ಟದ್ದು. ಎಲ್ಲ ಖಾಲಿ ಹುದ್ದೆ ಭರ್ತಿ ಮಾಡಿ ಎಂಬ ಆಗ್ರಹ ನಮ್ಮದು. ಶೇ 56 ಒಳ ಮೀಸಲಾತಿ ನೀಡಿ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳೇ ಪದೇಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ- ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ರಾಜ್ಯ ನ್ಯಾಯಾಲಯದ ಕುಂಟುನೆಪ ಹೇಳದೇ ಈ ಸಮುದಾಯಗಳಿಗೆ ಉದ್ಯೋಗ ನೀಡಿ ನ್ಯಾಯ ಕೊಡಿ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಯುವಜನತೆ ಸೇರಿ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ. ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನೀವೆಷ್ಟು ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತೀರೆಂಬುದು ನಮಗೆ ತಿಳಿದಿಲ್ಲ. ಆದರೆ, ಯಾವ ಅಹಿಂದ ಸಮುದಾಯದ ಅಧಿಕಾರ ಹಿಡಿದ ಮುಖ್ಯಮಂತ್ರಿಗಳೇ ಆ ಸಮುದಾಯದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಶೋಷಿತ- ಪೀಡಿತ ಸಮುದಾಯಗಳನ್ನು ಕೆಣಕುತ್ತಿದ್ದಾರೆ. ಒಳ ಮೀಸಲಾತಿ ಜಾರಿ ಮಾಡದೇ ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಿದರೆ, ರಾಜ್ಯದಲ್ಲಿ ಮುಂದೆ ಆಗುವ ಘಟನೆಗಳಿಗೆ ತಾವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯುವಜನತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಯೋಮಿತಿ ಮೀರುತ್ತಿದೆ. ಅವರ ಸಹನೆಯ ಕಟ್ಟೆ ಒಡೆದು ಹೋಗಿದೆ. ಇದನ್ನು ಕೂಡ ಪರಿಗಣಿಸಿ ನ್ಯಾಯ ಕೊಡುವ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ತಮ್ಮ ಗೌರವ ಉಳಿಸಿಕೊಳ್ಳಬೇಕು. ಇದೇ 6ರಂದು ಅಧಿವೇಶನ ಆರಂಭ ಆಗುತ್ತಿದೆ. ಸರಣಿ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಪ್ರಾರಂಭ ಆಗಲಿದೆ. ನುಡಿದಂತೆ ನಡೆದ ಸರ್ಕಾರ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೋರಾಟ ಪ್ರಾರಂಭ ಮಾಡಲಿದ್ದಾರೆ. ಅತಿಥಿ ಉಪನ್ಯಾಸಕರ ಆಶ್ವಾಸನೆಯನ್ನೂ ಸರ್ಕಾರ ಈಡೇರಿಸಿಲ್ಲ. ಅವರೂ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಗಮನ ಸೆಳೆದರು.
ಕೆ.ಎಸ್.ಆರ್.ಟಿ.ಸಿ- ಬಿ.ಎಂ.ಟಿ.ಸಿ ನೌಕರರಿಗೆ ಪಿಎಫ್- ಗ್ರಾಚ್ಯುಟಿ ಕೊಡದೇ ಅನ್ಯಾಯ ಮಾಡುತ್ತಿದ್ದು, ಅವರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರೂ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿಗೆ ಬಂದು ತಲುಪಿದೆ. ಮತ್ತೊಂದೆಡೆ 108 ಆಂಬುಲೆನ್ಸ್ ಕೆಟ್ಟು ನಿಂತು ನೌಕರರಿಗೆ ಸಂಬಳ ಕೊಟ್ಟಿಲ್ಲ. 34 ತಿಂಗಳಿನಿಂದ ಗುತ್ತಿಗೆದಾರರಿಗೆ ಕೊಡಬೇಕಾದ ಸುಮಾರು 40- 45 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ ಎಂದು ಬಿ.ವೈ.ವಿಜಯೇಂದ್ರ ವಿವರಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರು ಭಾಗವಹಿಸಿದ್ದರು.















