ಗದಗ: ರಾಜ್ಯ ಸರ್ಕಾರ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಖರೀದಿಸುವ ಭರವಸೆ ನೀಡಿ, ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುವ ಬದಲು, ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ ಖರೀದಿ ಮಾಡಲು ಅವಕಾಶ ಇದೆ. ಸುಮಾರು 200 ರಿಂದ 300 ಕೋಟಿ ಖರ್ಚು ಮಾಡಿ ಮೆಕ್ಕೆ ಜೋಳ ಖರೀದಿಸಿ ರೈತರ ರಕ್ಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಶನಿವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ರೈತರು ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಅವರ ಬದುಕು ಬಯಲ ಬದುಕು. ಒಳ್ಳೆ ಮಳೆ ಬರುತ್ತೆ ಅಂತ ಬಿತ್ತನೆ ಮಾಡುವುದು, ಮಳೆ ಬಂದರೆ ಬೆಳೆ ಎನ್ನುವಂತೆ ಆಗಿದೆ. ಬೆಳೆ ಬಂದರೆ ಬೆಲೆ ಸಿಗಲ್ಲ. ಇವತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನೀತಿ ಇಟ್ಟುಕೊಂಡು ಕೆಲಸ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಬೆಂಬಲ ಬೆಲೆ ಯೋಜನೆ ಪರಿಣಾಮ ರೈತರಿಗೂ ಅನುಕೂಲವಾಗುತ್ತದೆ. ಖರೀದಿ ಮಾಡಿದ ಸರ್ಕಾರಕ್ಕೂ ನಷ್ಟವಾಗುವುದಿಲ್ಲ. ಕೇಂದ್ರ ರಾಜ್ಯ ಸರ್ಕಾರ ಸಂಘರ್ಷ ಮಾಡಿದರೆ ಇಬ್ಬರ ನಡುವೆ ಕೂಸು ಬಡವಾದಂತೆ ಆಗುತ್ತದೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಗಳು ರೈತನಿಗೆ ಸೇರಿವೆ ಎಂದು ಹೇಳಿದರು.
ಎರಡು ಪಟ್ಟು ಪರಿಹಾರ ಕೊಟ್ಟಿದ್ದೆ:
ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಇಂದಿನ ಸಿಎಂ ಪರಿಹಾರ ಯಾವಾಗ ಕೊಡುತ್ತೀರಿ ಎಂದು ಟೇಬಲ್ ಕುಟ್ಟಿ ಕೇಳಿದರು. ಆಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಕೊಟ್ಟೆ, ಒಣ ಬೇಸಾಯಕ್ಕೆ 6,300 ಇದ್ದುದ್ದು 13,600 ನಿಗದಿ ಮಾಡಿದೆ, ನೀರಾವರಿಗೆ 12 ಸಾವಿರ ಕೊಡುತ್ತಿದ್ದರು ನಾನು 25 ಸಾವಿರ ಕೊಟ್ಟೆ, ತೋಟಗಾರಿಕೆಗೆ 18 ಸಾವಿರ ಕೊಡುತ್ತಿದ್ದರು, ನಾನು 28 ಸಾವಿರ ಕೊಟ್ಟೆ. ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಲಿಲ್ಲ. ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸ್ಸಿರಬೇಕು. ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆ ತೊರಿಸಬೇಕು. ಮಾರುಕಟ್ಟೆಯಲ್ಲಿ 2,400 ಬರುತ್ತದೆ ಎಂದು ರೈತರು ಮಾರುಕಟ್ಟೆಗೆ ಮೆಕ್ಕಜೋಳ ತರುತ್ತಿದ್ದಾರೆ. ಆದರೆ, ದರ 1,600 ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಹೆಂಗೆ ನಡೆದುಕೊಳ್ಳುತ್ತದೆ ಎನ್ನುವುದು ಮುಖ್ಯ. ಸರ್ಕಾರ ಗೋಣಿ ಚೀಲ ಹಿಡಿದುಕೊಂಡು ಹೋಗಬೇಕು ಎಂದು ದೇವರಾಜ ಅರಸ್ ಹೇಳಿದ್ದರು. ಆಗ ತಾನೆ ಮಾರುಕಟ್ಟೆ ಬೆಲೆ ಏರುತ್ತದೆ. ವಿದೇಶದಿಂದ ಆಮದು ಮಾಡಿಕೊಳ್ಳುವುದು ಒಮ್ಮೆಲೆ ಆಗುವುದಿಲ್ಲ. ಯಾವಾಗ ಅಗತ್ಯ ಇದೆ ಆಗ ಮಾತ್ರ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದ ರೈತರಿಗೆ ನ್ಯಾಯ:
ಕಳೆದ ವರ್ಷ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆದಿದೆ. ಈ ವರ್ಷ 2 ಲಕ್ಷ ಮೆಟ್ರಿಕ್ ಟನ್ ನಷ್ಟ ಆಗಿದೆ. ಇಂತಹ ಸಂದರ್ಭದಲ್ಲಿ ಹೊರಗಡೆ ಏನು ಆಗುತ್ತದೆ ಎನ್ನುವುದಕ್ಕಿಂತ ರೈತರನ್ನು ಉಳಿಸಲು ಏನು ಮಾಡಬೇಕು ಎಂದು ಯೋಚಿಸಬೇಕು. ನಾನು ಸಿಎಂಗೆ ಪತ್ರ ಬರೆದಿದ್ದೆ ಆ ಪ್ರಕಾರ ಅವರು ಮಾತನಾಡಿ ಲಕ್ಷ್ಮೇಶ್ವರ ರೈತರ ಹೋರಾಟದಿಂದ ಇಡೀ ರಾಜ್ಯದ ರೈತರಿಗೆ ನ್ಯಾಯ ಸಿಗುವಂತಾಗಿದೆ. ನಿಮ್ಮ ಬಲ ಶಕ್ತಿ ಒಗ್ಗಟ್ಡು ಸರ್ಕಾರದ ಕಣ್ಣು ತೆರೆಸಿದೆ. ವಿದೇಶದಲ್ಲಿ ಸೀಜನ್ ಕ್ಕಿಂತ ಮುಂಚೆ ಬೆಲೆ ನಿಗದಿ ಮಾಡುತ್ತಾರೆ ಅದಕ್ಕೆ ಶೇ 10% ದರ ಕಡಿಮೆಯಾದರೆ ಸರ್ಕಾರ ದುಡ್ಡು ಕೊಡುತ್ತದೆ. ಅಲ್ಲಿ ರೈತ ಆದಾಯದ ಲೆಕ್ಕ ಇಟ್ಡುಕೊಂಡು ಖರ್ಚು ಮಾಡುತ್ತಾನೆ. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಹೆಚ್ಚು ಬಾರಿ ಗೊಬ್ಬರ ಎಣ್ಣೆ ಹಾಕುವ ಪ್ರಸಂಗ ಬಂದಿದೆ. ಈಗ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತೇವೆ ಅಂತ ಹೇಳಿದ್ದಾರೆ. ಯಾವ ಎಜೆನ್ಸಿ ಮೂಲಕ ಖರೀದಿ ಮಾಡುತ್ತಾರೆ ಅದನ್ನು ಹೇಳಿಲ್ಲ. ಯಾವ ಎಜೆನ್ಸಿಯಿಂದ ಖರಿದಿಸುತ್ತಾರೆ ಎನ್ನುವುದು ಮುಖ್ಯವಾಗಿದೆ. ಖರೀದಿಸುವ ಅಧಿಕಾರ ಸರ್ಕಾರಕ್ಕಿದೆ. ಹತ್ತು ಲಕ್ಷ ಮೆಟ್ರಿಕ್ ಟನ್ ಮಾತ್ರ ಖರಿದಿಸುತ್ತೇವೆ ಅಂತ ಹೇಳಿದ್ದಾರೆ. ಮಾರುಕಟ್ಟೆಗೆ 54 ಲಕ್ಷ ಮೆಟ್ರಿಕ್ ಟನ್ ಬರುತ್ತದೆ. ಆಗ ಮತ್ತೂ ಬೆಲೆ ಏರುವುದಿಲ್ಲ ಹೀಗಾಗಿ ಹೆಚ್ಚಿಗೆ ಖರೀದಿಗೆ ಆದೇಶ ಮಾಡಬೇಕು. ಕೆಎಂಎಫ್ ನಿಂದ ನೇರ ಖರೀದಿಸಲು ಸೂಚಿಸಬೇಕು. ಎಥೆನಾಲ್ ಕಂಪನಿಗಳು ಗೋವಿನ ಜೋಳ ಖರಿದಿಸುತ್ತಿವೆ. ಅವರು ಏಜೆಂಟರಿಂದ ಖರೀದಿಸಿದ್ದಾರೆ ಅದನ್ನು ತಪ್ಪಿಸಿ ನೇರವಾಗಿ ರೈತರಿಂದ ಖರೀದಿಸುವ ವ್ಯವಸ್ಥೆ ಮಾಡಬೇಕು. ಸುಮಾರು 35 ಎಥೆನಾಲ್ ಫ್ಯಾಕ್ಟರಿ ಇದೆ. ರಾಜ್ಯ ಸರ್ಕಾರ ರೈತರ ಜೊತೆಗಿದೆಯೋ ಕಾರ್ಖಾನೆ ಮಾಲೀಕರ ಜೊತೆ ಇದೆಯೊ ಹೇಳಬೇಕು. ಇಲ್ಲದಿದ್ದರೆ ಜನರು ನಿಮ್ಮ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಬೆಲೆ ಆಯೋಗದ ವರದಿ ಜಾರಿಮಾಡಲಿ:
ಸರ್ಕಾರ ಖರೀದಿಸುವಲ್ಲಿ ಗ್ರೇಡಿಂಗ್ ಸಮಸ್ಯೆ ಇದೆ. ರಾಜ್ಯ ಸರ್ಕಾರ ರೈತರ ಮಾಲನ್ನು ವಾಪಸ್ ಕಳುಹಿಸದೇ ಕೇಂದ್ರ ಸರ್ಕಾರ 2400 ರೂ ದರ ನಿಗದಿ ಮಾಡಿದ ಸರ್ಕಾರ 500 ರೂ ಸೇರಿಸಿ ಖರೀದಿಸಬೇಕು. ರಾಜ್ಯ ಸರ್ಕಾರ ಆವರ್ತ ನಿಧಿಯಿಂದ ಖರೀದಿ ಮಾಡಲಿ ಅದಕ್ಕೆ ಅವಕಾಶ ಇದೆ. ಇದಕ್ಕೆ ಸುಮಾರು 200 ರಿಂದ 300 ಕೋಟಿ ಖರ್ಚು ಮಾಡಬೇಕು. ರಾಜ್ಯ ಸರ್ಕಾರ ಬೆಲೆ ನಿಗದಿ ಮಾಡಲು ಆಯೋಗ ರಚನೆ ಮಾಡಿತ್ತು. ಆಯೋಗ ವರದಿ ನೀಡಿದೆ ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ದರ ನಿಗದಿ ಮಾಡಲಿ. ಈಗಾಗಲೇ ಹೆಸರು ಕೇಂದ್ರ ತೆರೆದಿದ್ದಾರೆ. ಅಲ್ಲಿ ಗ್ರೇಡಿಂಗ್ ಮಾಡಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಗೋವಿನ ಜೋಳದ ವಿಚಾರದಲ್ಲಿಯೂ ಹಾಗೇ ಆಗಬಾರದು ಅದಕ್ಕಾಗಿ ಎಲ್ಲ ಖರೀದಿ ಕೇಂದ್ರದಲ್ಲೂ ರೈತ ಪ್ರತಿನಿಧಿಗಳನ್ನು ಕೂಡಿಸಬೇಕು. ಸರ್ಕಾರ ಯಾವ ರೀತಿ ಖರಿದಿ ಮಾಡುತ್ತದೆ ಎಂದು ನೋಡೋಣ ನಾವು ರೈತರ ಜೊತೆಗೆ ನಿಲ್ಲುತ್ತೇವೆ. ಈ ವ್ಯವಸ್ಥೆ ಮೆಟ್ಟಿ ನಿಲ್ಲಬೇಕೆಂದರೆ ಒಗ್ಗಟ್ಟು ಮುಖ್ಯವಾಗಿದೆ. ಶ್ರೀಗಳು ಅಮರಣಾಂತ ಉಪವಾಸ ಕುಳಿತು ರೈತರಿಗಾಗಿ ಪ್ರಾಣ ಕೊಡಲು ಸಿದ್ದ ಎಂದು ಹೇಳಿದರು. ನಿಮ್ಮದು ನ್ಯಾಯ ಸಮ್ಮತ ಹೋರಾಟ ಇದೆ. ಈ ಹೋರಾಟಕ್ಕೆ ಜಯ ಸಿಗುತ್ತದೆ. ನಾನು ಕೇಂದ್ರ ಸರ್ಕಾರದ ಜೊತೆಗೂ ಮಾತನಾಡಿ ರಾಜ್ಯಕ್ಕೆ ಸ್ಪಷ್ಟ ನಿರ್ದೇಶನ ಹಾಗೂ ಸಹಕಾರ ನೀಡುವಂತೆ ಮಾತನಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು















