ಬೆಂಗಳೂರು: ನಮ್ಮ ಸಮುದಾಯದ ಬಡ ಹೆಣ್ಣುಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿಯು ಜೀವನೋಪಾಯ ನೀಡುವುದಾಗಿ ಕೋರ್ಟ್ ನಲ್ಲಿ ಒಪ್ಪಿಗೊಂಡು ಅದನ್ನು ಕೊಡದೇ ಸತಾಯಿಸುತ್ತಿದ್ದು, ಇದನ್ನು ಇಡೀ ವಿಶ್ವಕರ್ಮ ಸಮುದಾಯ ಕಟುವಾಗಿ ಖಂಡಿಸುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಮಂಗಳವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಪುತ್ತೂರಿನ ವಿಶ್ವಕರ್ಮ ಸಮಾಜದ ಬಡ ಹೆಣ್ಣು ಮಗಳಾದ ಪೂಜಾ ಆಚಾರ್ ಎನ್ನುವವರ ಮೇಲೆ ಅತ್ಯಚಾರವೆಸಗಿ ಒಂದು ಗಂಡು ಮಗುವಿನ ಹುಟ್ಟಿಗೆ ಕಾರಣನಾದ ಕೃಷ್ಣ ಜೆ ರಾವ್ ಆರೋಪಿಯಾಗಿದ್ದು, ಈ ಪ್ರಕರಣದ ಸಂಬಂಧ ಕೋರ್ಟ್ ನಲ್ಲಿ ಕೂಡ ವಿಚಾರಣೆ ನಡೆಯುತ್ತಿದೆ. ಸದ್ಯ ಮಧ್ಯಂತರ ಪ್ರಕರಣಕ್ಕೆ ಮಧ್ಯಂತರ ತಡೆಯನ್ನು ನೀಡಲಾಗಿದ್ದು, ಅದು ಷರತ್ತುಗೊಳಪಟ್ಟ ಆದೇಶವಾಗಿದೆ. ನ್ಯಾಯಾಲಯದ ಷರತ್ತಿನ ಪ್ರಕಾರ 2026 ರ ಮೇ 1 ರಿಂದ 75 ಸಾವಿರ ರೂ ಗಳನ್ನು ಕೇಸಿನ ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು ಸಂತ್ರಸ್ತೆಗೆ ನೀಡಬೇಕು ಎಂದು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದು ಈ ಸಂಬಂಧ ಮಧ್ಯಂತರ ಆದೇಶವನ್ನು ನೀಡಲಾಗಿದ್ದರೂ ಆರೋಪಿ ಮತ್ತು ಆತನ ಕುಟುಂಬಸ್ಥರು ಸಂತ್ರಸ್ಥ ಹೆಣ್ಣುಮಗಳ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ. ಆದ್ದರಿಂದ ಆರೋಪಿ ಕೃಷ್ಣ ಜೆ ರಾವ್ ಮತ್ತು ಇತರ ಆರೋಪಿಗಳಾದ ಆತನ ತಂದೆ ಪಿ.ಜಿ ಜಗನ್ನನಿವಾಸ ರಾವ್, ಸಹೋದರಿ ವೈಷ್ಣವಿ ಪಿ. ಜಿ. ರಾವ್, ದೊಡ್ಡಪ್ಪ ಚಂದ್ರಶೇಖರ್ ಪಿ.ಜಿ ಅವರುಗಳ ಮೇಲೆ ಈ ಕೂಡಲೇ ಪುತ್ತೂರು ತಾಲೂಕಿನ ಪೊಲೀಸರು ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೂಜಾ ಆಚಾರ್ ಅವರಿಗೆ ಯಾವುದೇ ಬೆಲೆ ನೀಡದೇ ಇರುವುದನ್ನು ನಾವು ಖಂಡಿಸುತ್ತೇವೆ. ಇವರು ಹಿಂದುಳಿದ ಸಮುದಾಯವಾದ ವಿಶ್ವಕರ್ಮ ಸಮಾಜಕ್ಕೆ ಸೇರಿದ್ದಾರೆ. ಇಲ್ಲಿ ಯಾರೂ ಸಂತ್ರಸ್ಥೆಯ ಸಂಬಂಧಿಗಳು ಇಲ್ಲ. ಆದರೆ ಸಮಾಜ ಇಂತಹ ಅನ್ಯಾಯವನ್ನು ನೋಡುತ್ತಾ ಸುಮ್ಮನಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ನ್ಯಾಯ ಕೊಡಿಸುವುದರ ಜೊತೆಗೆ ಆರೋಪಿ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡುತ್ತದೆ ಎಂದು ನಂಬಿ ನಂಬಿದ್ದೇವೆ. ಪೂಜಾ ಆಚಾರ್ ಮತ್ತು ಮಗುವಿಗೆ ನ್ಯಾಯ ಕೊಡಿಸುವವರೆಗೂ ಕಾನೂನಿನ ಪ್ರಕಾರ ವಿಶ್ವಕರ್ಮ ಸಮಾಜ ಹೋರಾಟ ಮಾಡಲಿದೆ ಎಂದು ಕೆ.ಪಿ. ನಂಜುಂಡಿ ತಿಳಿಸಿದರು.
ಅಭಯಹಸ್ತ ಆದಿಲಕ್ಷ್ಮೀ ಸಂಸ್ಥಾನ ಮಧುಗಿರಿ ತಾಲೂಕಿನ ನಿಠರಹಳ್ಳಿ ಮಠದ ನೀಲಕಂಠ ಮಹಾಸ್ವಾಮೀಜಿಗಳು, ಸಲೇಪೇಟೆ ವಿಶ್ವಕರ್ಮ ಏಕದಂಡಗಿ ಮಠ ಮತ್ತು ಮಹಾಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ದೊಡ್ಡಂದ್ರ ಸ್ವಾಮೀಜಿಗಳು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗೋಧಿ ಹೊಸಸಲಮನೆ ಅಮ್ಮನವರ ಸಂಸ್ಥಾನ ಮಠದ ಗಣೇಶ ಮಹಾಸ್ವಾಮಿ, ಕೆ.ಪಿ.ಸಿ.ಸಿ. ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಲಗ್ಗೆರೆ ಓಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರವಿಕುಮಾರ್, ಬಿಡದಿ ಜಿಲ್ಲಾ ಮಹಾಸಭಾ ಅಧ್ಯಕ್ಷ ಜಿ. ರವಿಕುಮಾರ್ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.















