ಬೆಳಗಾವಿ: ನಗರದ ಹೊರವಲಯದ ಸಿಂಧೋಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಯ ತೆರವು ಕಾರ್ಯಾಚರಣೆಯನ್ನು ಗುರುವಾರ ಕೈಗೊಳ್ಳಲಾಯಿತು.
ಈ ಬಡಾವಣೆಯು 11 ಎಕರೆ ವ್ಯಾಪ್ತಿಯಲ್ಲಿ ತಲೆಯೆತ್ತಿತ್ತು. ಯಾವುದೇ ರೀತಿಯ ಪರವಾನಿಗೆಗಳನ್ನು ಪಡೆಯದೆ ಜಮೀನಿನ ಮಾಲೀಕರು ಬಡಾವಣೆಯನ್ನು ಮಾಡಿ ನಿವೇಶನಗಳನ್ನು ಹಂಚಲು ಮುಂದಾಗಿದ್ದರು. ಈ ಕುರಿತು ಮಾಹಿತಿ ಪಡೆದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಿ. ಡಬ್ಲು ಶಕೀಲ್ ಅಹಮದ್ ಅವರು ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ತಾವೇ ಖುದ್ದಾಗಿ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಕೊಂಡಿದ್ದರು.
ಕಾರ್ಯಾಚರಣೆಯ ಕುರಿತು ಮಾತನಾಡಿರುವ ಆಯುಕ್ತರಾದ ಶಕೀಲ್ ಅಹಮದ್ ಈ ಅನಧಿಕೃತ ಬಡಾವಣೆಯನ್ನು ಖಾಸಗಿ ಜಮೀನಿನ ಮಾಲೀಕರು ಸ್ವತಃ ಅಭಿವೃದ್ಧಿ ಪಡಿಸುತ್ತಿದ್ದರು. ಕೂಲಂಕುಶವಾಗಿ ಪರಿಶೀಲಿಸಿದಾಗ ಈ ಬಡಾವಣೆಗೆ ಯಾವುದೇ ರೀತಿಯ ಪರವಾನಿಗೆಗಳನ್ನು ಪಡೆಯಲಾಗಿಲ್ಲ ಎನ್ನುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಬಡಾವಣೆಯ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಮಾಲೀಕರ ವಿರುದ್ಧ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಟೌನ್ ಪ್ಲಾನಿಂಗ್ ಅಧಿಕಾರಿ ಬಿ.ವಿ ಹಿರೇಮಠ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುಶ್ರೀ, ಕಿರಿಯ ಅಭಿಯಂತರರಾದ ಪ್ರಸನ್ನ ಸೇರಿದಂತೆ ಇತರ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯ ವೇಳೆ ಉಪಸ್ಥಿತರಿದ್ದರು.















