ಬೆಂಗಳೂರು: ಕುಂದಲಹಳ್ಳಿ ಗೇಟ್ ಸಮೀಪದ ಎ.ಇ.ಸಿ.ಎಸ್ ಲೇಔಟ್ನ 60 ಅಡಿ ರಸ್ತೆಯಲ್ಲಿ ಏಪ್ರಿಲ್ 17 ಮತ್ತು 18 ರಂದು ಡಾಂಬರ್ ಹಾಸುವ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಮತ್ತೆ ಏಪ್ರಿಲ್ 19 ರಂದು ಅದೇ ಹೊಸ ರಸ್ತೆಯನ್ನು ತೋಡಿರುವುದು ಗಂಭೀರ ಅವ್ಯವಸ್ಥೆ ಹಾಗೂ ಸಾರ್ವಜನಿಕ ಹಣದ ನೇರ ದುರುಪಯೋಗವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ವಲಯದ ಜಿಬಿಎ ಅಧಿಕಾರಿಗಳಾದ ರವಿ ಕುಮಾರ್, ಶ್ರೀಕಾಂತ್ ಹಾಗೂ ಸಂತೋಷ್ ಅವರುಗಳ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇದು ಕೇವಲ ನಿರ್ಲಕ್ಷ್ಯವಲ್ಲ ಸ್ಪಷ್ಟವಾದ ಹುದ್ದೆಯ ದುರುಪಯೋಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಕೇವಲ ಎರಡು ದಿನಗಳಲ್ಲಿ ತೋಡುವುದು ಎಂದರೆ ಅದು ಆಡಳಿತ ವೈಫಲ್ಯವಲ್ಲ, ಸಾರ್ವಜನಿಕ ಹಣದ ಮೇಲೆ ನಡೆಯುತ್ತಿರುವ ಸಂಘಟಿತ ದಂಧೆ. ಇದಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಹೊಸದಾಗಿ ಅಸ್ಫಾಲ್ಟ್ ಹಾಕಿದ ರಸ್ತೆಯನ್ನು ತೋಡಲು ಎ.ಇ.ಇ ಶ್ರೀಕಾಂತ್ ಅವರು ಬಿಲ್ಡರ್ಗೆ ಅನುಮತಿ ನೀಡಿರುವುದು ಸ್ಪಷ್ಟವಾಗಿದ್ದು, ಇದು ಸಂಪೂರ್ಣ ಜವಾಬ್ದಾರಿಯಿಲ್ಲದ ಕ್ರಮವಾಗಿದೆ. ಘಟನೆ ಬಹಿರಂಗವಾದ ನಂತರ ಅದನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿರುವುದೂ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಮಾರ್ಷಲ್ ಸಿಬ್ಬಂದಿ ಕಾರ್ಮಿಕರ ಬಳಿಯಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ, ಅದನ್ನು ಹಿಂತಿರುಗಿಸಿ ಕೆಲಸ ಮುಂದುವರಿಸಲು ಸೂಚನೆ ನೀಡಿದರೆಂಬ ಆರೋಪವೂ ಕೇಳಿಬಂದಿದೆ. ಈ ವಿಷಯ ತಿಳಿದ ತಕ್ಷಣ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ಕೆಲಸವನ್ನು ನಿಲ್ಲಿಸಿರುವುದು ಗಮನಾರ್ಹವಾಗಿದೆ. ಬಳಿಕ ಅನುಮತಿ ನೀಡಿಲ್ಲ ಎಂದು ಹೇಳುವ ಮೂಲಕ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಹೊಣೆ ತಪ್ಪಿಸಲು ಯತ್ನಿಸುವುದು ಹೊಸದಲ್ಲ. ಆದರೆ ಈ ಬಾರಿ ತಪ್ಪಿತಸ್ಥರನ್ನು ರಕ್ಷಿಸುವ ಯಾವುದೇ ಪ್ರಯತ್ನವನ್ನೂ ಸಹಿಸಲಾಗುವುದಿಲ್ಲ. ಇದಲ್ಲದೆ, ಇದೇ ಅಧಿಕಾರಿಯ ವಿರುದ್ಧ ಹಿಂದೆಯೂ ಲಂಚ ಸ್ವೀಕರಿಸಿ ಅಕ್ರಮ ಕಟ್ಟಡಗಳಿಗೆ ಅನುಮತಿ ನೀಡಿದ ಆರೋಪದ ಮೇಲೆ ಮಾಧ್ಯಮಗಳಲ್ಲಿ ಸ್ಟಿಂಗ್ ಆಪರೇಶನ್ ನಡೆದಿದ್ದು, ಅದರ ವರದಿಗಳು ಪ್ರಸಾರವಾಗಿರುವುದು ಗಮನಾರ್ಹ ಸಂಗತಿಯಾಗಿದೆ ಎಂದಿದ್ದಾರೆ.
ಇದಲ್ಲದೆ, ಸ್ಥಳೀಯ ಆಟದ ಮೈದಾನವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅನುಮತಿ ನೀಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ಅಗತ್ಯವಾದ ಸಾರ್ವಜನಿಕ ಸ್ಥಳಗಳ ಕೊರತೆ ಉಂಟಾಗಿದೆ. ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಮೂಲಸೌಕರ್ಯವನ್ನು ಹಾನಿಗೊಳಪಡಿಸುವ ಯಾವುದೇ ಅಧಿಕಾರಿಗಳನ್ನೂ ಬಿಡುವುದಿಲ್ಲ. ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತು ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನದಲ್ಲಿ ಉಪಮುಖ್ಯ ಮಂತ್ರಿ ನಿವಾಸದ ಮುಂದೆ ಭಾರೀ ಧರಣೆ ಹಮ್ಮಿಕೊಳ್ಳಲಾಗುವುದು. ಈ ಹೋರಾಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಕರ್ನಾಟಕ ರಾಜ್ಯ ಯುವ ಸಮೂಹ ಸಿದ್ಧವಾಗಿದೆ, ಸ್ಥಳೀಯ ನಿವಾಸಿಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್. ಸಂಗಮೇಶ್ ಕೋರಿದ್ದಾರೆ.















