ಬೆಂಗಳೂರು: ಗ್ರಾಮೀಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಚಟುವಟಿಕೆಗಳನ್ನು ಅಕ್ಷರದಾನ ಫೌಂಡೇಶನ್ ನಡೆಸುತ್ತಿದೆ ಎಂದು ಸಂಸ್ಥಾಪಕಿ ರೇವತಿ ಕಾಮತ್ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮಗಳ ಶಾಲೆಗಳನ್ನು ಕೇಂದ್ರೀಕರಿಸಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಸೇರಿದಂತೆ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸತತ ಏಳು ವರ್ಷಗಳಿಂದ ಅಕ್ಷರ ದಾನ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ಶಾಲೆಗಳಲ್ಲಿ ಹಮ್ಮಿಕೊಳ್ಳುವ ಕೆಲ ಚಟುವಟಿಕೆಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಅವರ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಎಂದರು.
ಈಗಾಗಲೇ ಮಂಡ್ಯ, ಗದಗ, ಬೆಂಗಳೂರು ನಗರ ಜಿಲ್ಲೆಗಳ ಕೆಲವು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾನ ಫೌಂಡೇಶನ್ ಕ್ರಿಯಾಶೀಲ ಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವು ಕ್ಷೇತ್ರಗಳಲ್ಲಿ ಉತ್ತಮ ಜ್ಞಾನ ಪಡೆದ ಯುವಕ– ಯುವತಿಯರು ಕೂಡ ಸ್ವಯಂ ಪ್ರೇರಣೆಯಿಂದ ನಮ್ಮ ಜೊತೆ ಬರಲು ಆಸಕ್ತಿ ತೋರಿಸಿದ್ದು, ಅವರ ಸೇವೆಯನ್ನು ಬಳಸಿಕೊಂಡು ಶಾಲೆಗಳ ಶೈಕ್ಷಣಿಕ ಪ್ರಗತಿಗಾಗಿ ಮುಂದೆಯೂ ಶ್ರಮಿಸುತ್ತೇವೆ ಎಂದು ಹೇಳಿದರು.
ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಬೆಳೆದಾಗ ಮಾತ್ರ ಇಡೀ ದೇಶ ಬೆಳೆಯಲು ಸಾಧ್ಯ. ನಮ್ಮ ಗ್ರಾಮೀಣ ಮಕ್ಕಳಲ್ಲಿ ಇನ್ನೊಬ್ಬ ಕಲಾಂ, ಎಂ. ಎಸ್. ಸುಬ್ಬುಲಕ್ಷ್ಮಿ, ಸಿ. ಎನ್. ಆರ್. ರಾವ್ ಹುಟ್ಟಿಬರಬಹುದಾದ ಸಾಧ್ಯತೆ ಇರುವುದು ಹಳ್ಳಿಗಳಿಂದ ಮಾತ್ರ. ಆದ್ದರಿಂದ ನಮ್ಮ ಫೌಂಡೇಷನ್ ಏಳು ವರ್ಷಗಳಲ್ಲಿ ಮೂರು ಶಾಲೆಗಳನ್ನು ಬಹುತೇಕ ಸ್ವಂತವಾಗಿ ಪರಿವರ್ತಿಸಿದೆ. ಇನ್ನಷ್ಟು ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಡಿಜಿಟಲ್ ತರಗತಿ, ಮೂಲಸೌಕರ್ಯ, ಸ್ವಚ್ಛ ಶೌಚಾಲಯ, ಆರೋಗ್ಯ ಮತ್ತು ನೈರ್ಮಲ್ಯದೊಂದಿಗೆ ಕಲಿಯುವಂತಾಗಲು ಅಕ್ಷರದಾನವನ್ನು ಈಗ ಮತ್ತಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕರ ಮುಂದೆ ತರಲಾಗುತ್ತಿದೆ ಎಂದು ಹೇಳಿದರು.
ಏಳು ವರ್ಷಗಳ ಹಿಂದೆ ಮಂಡ್ಯ ತಾಲ್ಲೂಕಿನ ಹಲ್ಲೆಗರೆಯ ಪರಿಣಿತ ಶಾಲೆಯಿಂದ ಅಕ್ಷರದಾನದ ಪಯಣ ಆರಂಭವಾಯಿತು. ಅಲ್ಲಿ ಬಿರುಕುಬಿಟ್ಟ ಛಾವಣಿ, ಶೌಚಾಲಯಗಳ ಕೊರತೆ, ಊಟದ ನಂತರ ಮಕ್ಕಳು ಕೈ ತೊಳೆಯಲು ನಲ್ಲಿಗಳಿಲ್ಲದಿರುವುದು ಹಾಗೂ ಶುದ್ಧ ಕುಡಿಯುವ ನೀರಿನ ಅಭಾವವನ್ನು ಕಂಡು, ಸ್ವಂತ ಹಣದಿಂದ ಆಧುನಿಕ ಶೌಚಾಲಯ ಘಟಕ ನಿರ್ಮಿಸಿ, ಇಡೀ ಶಾಲೆಯನ್ನು ನವೀಕರಿಸಿ, ಕೈ ತೊಳೆಯುವ ನಲ್ಲಿಗಳು ಹಾಗೂ ಆರ್.ಒ ಶುದ್ಧೀಕರಣ ಘಟಕ ಅಳವಡಿಸಲಾಯಿತು ಎಂದು ರೇವತಿ ಕಾಮತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ನ ಸಾಗರೋತ್ತರ ಅಧ್ಯಕ್ಷೆ ಅನಿತಾ ದಾಸಪ್ಪ, ಯುವ ಉದ್ಯಮಿ ಹಾಗೂ ಮಹಿಳಾ ಸುರಕ್ಷತಾ ವಿಭಾಗದ ಮುಖ್ಯಸ್ಥೆ ಸ್ನೇಹಾ ಗೌಡ, ಖ್ಯಾತ ವಸ್ತ್ರವಿನ್ಯಾಸಕಿ ರಜನಿ ರೇಖಾ ಹಾಗೂ ಲೇಖಕ ಡಾ. ಅಭಿನಂದನ್ ಬಿ ಉಪಸ್ಥಿತರಿದ್ದರು.














