ಗೋವಾ ಗಡಿ ಸಂಪರ್ಕಿಸುವ ರಸ್ತೆಗೆ ಪರ್ಯಾಯ ಮಾರ್ಗ ಅಭಿವೃದ್ಧಿಪಡಿಸಿ; ಸಚಿವರಿಗೆ ಮನವಿ

WhatsApp
Telegram
Facebook
Twitter
LinkedIn

ಖಾನಾಪುರ: ರಾಜ್ ಟೈಲ್ಸ್ ನಿಂದ ಗೋವಾ ಗಡಿಯವರೆಗಿನ ರಸ್ತೆ ಸುಧಾರಣಾ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಮಾರ್ಗದ ಹಳೆ ಫಿಶ್ ಮಾರ್ಕೆಟ್‌ನಿಂದ ಮಲಪ್ರಭಾ ಸೇತುವೆಯವರೆಗಿನ ರಸ್ತೆ ಭಾಗವು ನ್ಯಾಯಾಲಯದ ದಾವೆಯಿಂದಾಗಿ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯ ಮುಖಂಡ ವಿನಾಯಕ ಮುತಗೇಕರ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಪತ್ರವನ್ನು ಸಚಿವರಿಗೆ ಸಲ್ಲಿಸಿದ್ದು, ಅಡಚಣೆ ತಪ್ಪಿಸಲು ಕಂದಾಯ ನಕ್ಷೆಯಲ್ಲಿರುವ ಹಳೆ ಡೋಣೆ ಹಾಗೂ ಪಟ್ಟಣ ಪಂಚಾಯತ್ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಅಭಿವೃದ್ಧಿಪಡಿಸಬೇಕು. ಇದರಿಂದ ದಿನನಿತ್ಯ ಸಾರ್ವಜನಿಕರು ಹಾಗೂ ವಾಹನ ಸವಾರರು ಅನುಭವಿಸುತ್ತಿರುವ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗುತ್ತದೆ. ಇನ್ನು ಈ ರಸ್ತೆಯ ಅಗಲೀಕರಣ, ಸುಧಾರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಸುಗಮ ಪರ್ಯಾಯ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಈ ಪರ್ಯಾಯ ಮಾರ್ಗವು ನಿರ್ಮಾಣಗೊಂಡರೆ ಕೋರ್ಟ್ ದಾವೆಯಲ್ಲಿರುವ ರಸ್ತೆಯ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಮಾರ್ಗದಿಂದ ಖಾನಾಪುರ ಪಟ್ಟಣದ ನಾಗರಿಕರು ಹಾಗೂ ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಶಾಶ್ವತ ಹಾಗೂ ಸುಗಮ ಸಾರಿಗೆ ಸಂಪರ್ಕ ದೊರೆಯಲಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ವ್ಯಾಪಾರಸ್ಥರು, ರೈತರು, ಕೃಷಿ ಉತ್ಪನ್ನಗಳ ಸಾಗಾಣಿಕೆದಾರರು ಹಾಗೂ ತುರ್ತು ಸೇವೆಗಳ ವಾಹನಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸುವಂತೆ, ತಾಂತ್ರಿಕ ವರದಿ ಪಡೆದು ಈ ಪರ್ಯಾಯ ರಸ್ತೆ ಅಭಿವೃದ್ಧಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಚಿವರನ್ನು ಕೋರಿದ್ದಾರೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon