ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಬಾಕ್ಸೈಟ್ ‘ಸಾಮ್ರಾಜ್ಯ’!

WhatsApp
Telegram
Facebook
Twitter
LinkedIn

ಖಾನಾಪುರ: ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕ್ಸೈಟ್ ಅದಿರಿಗಾಗಿ ಮಣ್ಣು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಗಣಿಗಾರಿಕೆಗೆ ನೀಡಿರುವ ಅನುಮತಿ ಎಷ್ಟು? ವಾಸ್ತವವಾಗಿ ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ? ಎಂಬುದನ್ನು ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪರಿಶೀಲಿಸಬೇಕು ಎನ್ನುವುದು ಸಾರ್ವಜನಿಕ ವಲಯದ ಆಗ್ರಹವಾಗಿದೆ.

ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದೆ ಎನ್ನಲಾಗುತ್ತಿದ್ದು, ಮುಖ್ಯವಾಗಿ ರಸ್ತೆಗಳಲ್ಲಿ ಮಣ್ಣು ಹರಡಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಅವರ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.

ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಆರ್‌ಟಿಒ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಜಂಟಿಯಾಗಿ ಜಾಂಬೋಟಿ ವ್ಯಾಪ್ತಿಯ ಬಾಕ್ಸೈಟ್ ಗಾಗಿನ ಗಣಿಗಾರಿಕೆಯ ಸ್ಥಳ ಪರಿಶೀಲನೆ ನಡೆಸಬೇಕು. ಅನುಮತಿ ಪಡೆದ ಪ್ರಮಾಣ, ವಾಸ್ತವದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಪ್ರಮಾಣ, ವಾಹನಗಳ ಸಾಗಣೆ, ರಸ್ತೆ ಸಾಮರ್ಥ್ಯ, ಸುತ್ತಮುತ್ತಲಿನ ಪರಿಸರಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಕುರಿತು ಸಮಗ್ರ ವರದಿ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಜಾಂಬೋಟಿ ವ್ಯಾಪ್ತಿಯ ಗಣಿಗಾರಿಕೆ ಕುರಿತು ಕೇಳಿಬರುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಬೆಳಗಾವಿ ಜಿಲ್ಲಾಧಿಕಾರಿಗಳು ಕೂಡ ತಕ್ಷಣ ಸ್ಥಳ ಪರಿಶೀಲನೆಗೆ ಆದೇಶಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನುಬದ್ದ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜಾ ನೆರಳು ಪತ್ರಿಕೆಯ ಕಳಕಳಿ ಕೂಡ ಆಗಿದೆ.

ಸ್ಮಶಾನ ಬಂದ್, ರಸ್ತೆಗಳ ಸ್ಥಿತಿ ಅಧೋಗತಿಗೆ:

ಹಬ್ಬನಟ್ಟಿ ಗ್ರಾಮದ ಸ್ಮಶಾನ ಭೂಮಿಯ ಸಮೀಪವೇ ಗಣಿಗಾರಿಕೆ ನಡೆಯುತ್ತಿರುವುದರಿಂದ ಸ್ಮಶಾನಕ್ಕೆ ತೆರಳುವ ದಾರಿ ಬಂದ್ ಆಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಬೇಕಾಗಿದೆ. ಇನ್ನೊಂದೆಡೆ, ಗ್ರಾಮೀಣ ರಸ್ತೆಗೆ ನಿಗದಿಪಡಿಸಿರುವ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ತೂಕದ ಟ್ರಕ್‌ಗಳು ಸಂಚರಿಸುತ್ತಿವೆ ಎಂಬ ಆರೋಪವಿದೆ. ಸುಮಾರು 8 ಟನ್‌ ಸಾಮರ್ಥ್ಯದ ಗ್ರಾಮೀಣ ರಸ್ತೆಗಳಲ್ಲಿ 50 ಟನ್‌ವರೆಗೆ ಅದಿರನ್ನು ಹೊತ್ತ ಭಾರಿ ವಾಹನಗಳು ಸಂಚರಿಸುತ್ತಿವೆ ಎನ್ನಲಾಗುತ್ತಿದ್ದು, ಇದರಿಂದ ರಸ್ತೆ ಹಾನಿ ಹಾಗೂ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ಎದುರಾಗಿದೆ.

ಮಂತ್ಲಿ ಆರೋಪದ ತನಿಖೆ ಯಾವಾಗ?

ಬಾಕ್ಸೈಟ್ ಗಣಿಗಾರಿಕೆ ನಡೆಸುತ್ತಿರುವವರಿಂದ ವಿವಿಧ ಇಲಾಖೆಗಳ ಕೆಲ ಅಧಿಕಾರಿಗಳಿಗೆ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಆರೋಪಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ, ಆರೋಪ ನಿಜವೇ ಅಥವಾ ಸುಳ್ಳೇ ಎಂಬುದನ್ನು ಸಂಬಂಧಿಸಿದ ಇಲಾಖೆಗಳು ಪಾರದರ್ಶಕ ತನಿಖೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon