ಬೆಂಗಳೂರು: ನಿಖರ ಕ್ಯಾನ್ಸರ್ ಆರೈಕೆ ಕ್ಷೇತ್ರದಲ್ಲಿ ನೂತನ ಅಧ್ಯಾಯವನ್ನು ಪ್ರಾರಂಭಿಸುವ ಭಾರತದ ಪ್ರಮುಖ ಜೀನೋಮಿಕ್ಸ್ ಆಧಾರಿತ ರೋಗನಿರ್ಣಯ ಮತ್ತು ಸಂಶೋಧನಾ ಸೇವೆಗಳ ಸಂಸ್ಥೆ ಮೆಡ್‌ಜಿನೋಮ್ ಆಗಿದೆ. ಇದೀಗ ಅತ್ಯಂತ ಸೂಕ್ಷ್ಮವಾದ ಟ್ಯೂಮರ್-ಇನ್‌ಫಾರ್ಮ್ಡ್ ಮೊಲಿಕ್ಯುಲರ್ ರೆಸಿಡ್ಯುಯಲ್ ಡಿಸೀಸ್ ಪರೀಕ್ಷೆ ಆಂಕೋಟ್ರ್ಯಾಕ್ ಎಂ.ಆರ್.ಡಿ ಅನ್ನು ಬಿಡುಗಡೆಗೊಳಿಸಿದೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಕ್ಯಾನ್ಸರ್ ತಜ್ಞರುಗಳಾದ ಡಾ. ನೀತಿ ರೈಜಾದಾ, ಡಾ. ವಿನಾಯಕ್ ಮಕಾ, ಡಾ. ರಾಜೀವ್ ವಿಜಯಕುಮಾರ್ ಮತ್ತು ಮೆಡ್‌ಜಿನೋಮ್ ಲ್ಯಾಬ್ಸ್ ಲಿಮಿಟೆಡ್‌ನ ಸಿಇಒ ರಾಮಪ್ರಸಾದ್ ವೇದಂ ಈ ನೂತನ ಪರೀಕ್ಷೆಯನ್ನು ಜಂಟಿಯಾಗಿ ಅನಾವರಣಗೊಳಿಸಿದರು. ಈ ವೇಳೆ ಭಾರತದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿನ ಪ್ರಗತಿ, ಕ್ಯಾನ್ಸರ್ ಮರುಕಳಿಸುವುದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಪ್ರಾಮುಖ್ಯತೆ ಮತ್ತು ಕ್ಯಾನ್ಸರ್ ಆರೈಕೆಯಲ್ಲಿ ಮೊಲೆಕ್ಯುಲರ್ ಮಾನಿಟರಿಂಗ್ ಕುರಿತು ಈ ಸಂದರ್ಭದಲ್ಲಿ ತಜ್ಞರು ಸುದೀರ್ಘ ಚರ್ಚೆ ನಡೆಸಿದರು.
ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ತೀವ್ರವಾಗಿ ಹೆಚ್ಚುತ್ತಿದ್ದು, ಪ್ರತಿವರ್ಷ ಅಂದಾಜು 1.5 ಮಿಲಿಯನ್ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಮುಖ ಸವಾಲೆಂದರೆ ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ರೋಗದ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದಾಗಿದೆ.
ಈ ರೋಗನಿರ್ಣಯದ ಕೊರತೆಯನ್ನು ನೀಗಿಸಲು, ಮೆಡ್‌ಜಿನೋಮ್ ಸಂಸ್ಥೆಯು ಆಂಕೋಟ್ರ್ಯಾಕ್ ಎಂ.ಆರ್.ಡಿ ಎಂಬ ಭಾರತದ ಮೊದಲ ಅತ್ಯಂತ ಸಂವೇದನಾಶೀಲ ನೆಕ್ಸ್ಟ್-ಜನರೇಷನ್ ಸೀಕ್ವೆನ್ಸಿಂಗ್ ಆಧಾರಿತ ಟ್ಯೂಮರ್-ಇನ್‌ಫಾರ್ಮ್ಡ್ ಮಾಲಿಕ್ಯುಲರ್ ರೆಸಿಡ್ಯುಯಲ್ ಡಿಸೀಸ್ ಪರೀಕ್ಷೆಯನ್ನು ಪರಿಚಯಿಸಿದೆ. ಈ ಪರೀಕ್ಷೆಯು ರೋಗಿಯ ಮೂಲ ಜೀವಕೋಶ ಮತ್ತು ರಕ್ತದ ಮಾದರಿಯಿಂದ ಕಸ್ಟಮೈಸ್ ಮಾಡಿದ ಮಾಲಿಕ್ಯುಲರ್ ಪ್ರೊಫೈಲ್ ಅನ್ನು ರೂಪಿಸುವ ಮೂಲಕ, ರಕ್ತನಾಳಗಳಲ್ಲಿ ಹರಿಯುವ ಟ್ಯೂಮರ್ ಡಿಎನ್‌ಎ ಅನ್ನು ಪತ್ತೆ ಮಾಡುತ್ತದೆ. ಮುಂದಿನ ಹಂತದ ನಿರಂತರ ಗಮನಿಸುವಿಕೆಗೆ ಕೇವಲ ಸಾಧಾರಣ ರಕ್ತದ ಮಾದರಿಯಷ್ಟೇ ಇದಕ್ಕೆ ಸಾಕಾಗುತ್ತದೆ. ಇದು ಸಾಂಪ್ರದಾಯಿಕ ತಪಾಸಣಾ ವಿಧಾನಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ, ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಮೊದಲೇ ಪತ್ತೆಹಚ್ಚಲು ಕ್ಯಾನ್ಸರ್ ತಜ್ಞರಿಗೆ ನೆರವಾಗುತ್ತದೆ.
ಈ ಕುರಿತು ಮಾತನಾಡಿದ ಮೆಡ್‌ಜಿನೋಮ್ ಲ್ಯಾಬ್ಸ್ ಲಿಮಿಟೆಡ್ ಸಿಇಒ ಡಾ. ವೇದಂ ರಾಮ್ ಪ್ರಸಾದ್, ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ನಿರಂತರವಾಗಿ ಹೆಚ್ಚಾಗುತ್ತಿದೆ. ರೋಗದ ಯಾವುದೇ ಲಕ್ಷಣಗಳು ಕಾಣಿಸದಿರುವಾಗಲೂ, ಕ್ಯಾನ್ಸರ್ ಮರುಕಳಿಸುವ ಅಪಾಯವಿರುವ ರೋಗಿಗಳನ್ನು ಗುರುತಿಸುವುದು ತಜ್ಞರಿಗೆ ಎದುರಾಗುವ ಅತಿ ದೊಡ್ಡ ಸವಾಲಾಗಿದೆ. ನಮ್ಮ ಈ ವೈಯಕ್ತಿಕಗೊಳಿಸಿದ ಮತ್ತು ಅತ್ಯಂತ ಸೂಕ್ಷ್ಮವಾದ ಎನ್.ಜಿ.ಎಸ್. ಆಧಾರಿತ ಟ್ಯೂಮರ್-ಇನ್‌ಫಾರ್ಮ್ಡ್ ಎಂ.ಆರ್.ಡಿ ಪರೀಕ್ಷೆಯು ಪ್ರಸ್ತುತ ಇರುವ ಕ್ಲಿನಿಕಲ್ ಮೌಲ್ಯಮಾಪನ ಮತ್ತು ಇಮೇಜಿಂಗ್ ಗಳಿಗೆ ಪ್ರಮುಖ ಮಾಲಿಕ್ಯುಲರ್ ಒಳನೋಟವನ್ನು ನೀಡಲಿದೆ ಎಂದಿದ್ದಾರೆ.














