ಖಾನಾಪುರ: ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿಯ ದುರಾಡಳಿತದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎನ್ನುವಂತಾಗಿದೆ. ಖಾನಾಪುರ ತಾಲೂಕು ಪ್ರವೇಶಿಸುವ ಹೆಬ್ಬಾಗಿಲು ಆಗಿರುವ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀವು ಪ್ರವೇಶಿಸುತ್ತಿದ್ದಂತೆಯೇ ಮೂಗು ಮುಚ್ಚಿಕೊಳ್ಳುವುದು ಖಚಿತವಾಗಿದೆ
ಇಡೀ ದೇಶದಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಎಲ್ಲ ಕಡೆ ಸ್ವಚ್ಛತೆ ಇದ್ದರೆ, ಈ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ಬರೀ ಕಸವೇ ಕಾಣಿಸುತ್ತಿದೆ. ಸಾಮಾನ್ಯವಾಗಿ ಗ್ರಾಮದೊಳಗಿನ ಕಸವನ್ನು ಸಂಗ್ರಹಿಸಿ ಹೊರಗಡೆ ಬೇರೆ ಎಲ್ಲದರೂ ತ್ಯಾಜ್ಯ ಸಂಗ್ರಹ ಮಾಡಲಾಗುತ್ತದೆ. ಆದರೆ, ಈ ಹಲಕರ್ಣಿ ಗ್ರಾಮದಲ್ಲಿ ಮಾತ್ರ ಕಸವನ್ನು ಗ್ರಾಮದ ಮುಖ್ಯ ರಸ್ತೆ ಹಾಗೂ ವಸತಿ ಪ್ರದೇಶದಲ್ಲಿಯೇ ಹಾಕಿರುವುದು ವಿಚಿತ್ರವಾಗಿದೆ. ಕಳೆದ ಎಷ್ಟೋ ವರ್ಷಗಳಿಂದ ಇದು ಹೀಗೆಯೇ ನಡೆದುಕೊಂಡು ಬಂದಿದೆ ಎಂದು ಗ್ರಾಮಸ್ಥರು ಪ್ರಜಾ ನೆರಳು ಪತ್ರಿಕೆಯ ಮುಂದೆ ಗೋಳು ತೋಡಿಕೊಂಡಿದ್ದಾರೆ.
ಶಾಸಕರು, ಅಧಿಕಾರಿಗಳು ಇದೇ ರಸ್ತೆಯ ಮುಖಾಂತರವೇ ಸಂಚರಿಸುತ್ತಾರೆ. ಆದರೂ ಇಲ್ಲಿನ ಗಲೀಜು ವ್ಯವಸ್ಥೆಯನ್ನು ನೋಡಿಯೂ ನೋಡದಂತೆ ಇರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲ. ಇಲ್ಲಿನ ಗಲೀಜು ವ್ಯವಸ್ಥೆಯಿಂದ ನೊಂದ ಗ್ರಾಮಸ್ಥರು ಇಲ್ಲಿನ ಪಿಡಿಒ ರೇಷ್ಮಾಬಾಯಿ ಪಾಣಿವಾಲೆ ಇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸದರಿ ಪಿಡಿಒ ರೇಷ್ಮಾ ಮೇಡಮ್ ಅವರು ಜನರ ಮನವಿಗಳಿಗೆ ಸ್ಪಂದಿಸುವುದೇ ಇಲ್ಲ ಎಂದು ನಾಗರಿಕರು ನೊಂದು ನುಡಿಯುತ್ತಾರೆ. ರೇಷ್ಮಾ ಮೇಡಮ್ ಅವರು- ಲೇಔಟ್ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಸ್ವಲ್ಪ ಕಡಿಮೆ ಮಾಡಿ ಜನಸಾಮಾನ್ಯರ ಕಷ್ಟ ನಿವಾರಣೆಗೂ ಸ್ವಲ್ಪ ಸಮಯ ನೀಡಿ ಎಂಬುದು ಪತ್ರಿಕೆಯ ಕಳಕಳಿಯ ಮನವಿಯಾಗಿದೆ.
ಮಾನ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿರುವ ರಾಹುಲ್ ಶಿಂದೆ ಇವರು ತುಂಬಾ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಅವರು ಸಾಮಾನ್ಯವಾಗಿ ಇಂಥದ್ದನ್ನೆಲ್ಲ ಸಹಿಸುವುದಿಲ್ಲ. ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಆದರೂ, ಗೌರವಾನ್ವಿತ ರೇಷ್ಮಾ ಪಾಣಿವಾಲೆ ಅವರ ಕಾರ್ಯವೈಖರಿಯ ಅಷ್ಟೊಂದು ದೂರುಗಳು ಬಂದರೂ ಸಾಹೇಬರು ಯಾಕೋ ಕಣ್ಣು ಮುಚ್ಚಿದ್ದಾರೆ ಅನಿಸುತ್ತಿದೆ.
ಪ್ರತಿದಿನ ಈ ಊರಲ್ಲಿ ಕೆಟ್ಟ ವಾಸನೆಯಿಂದ ಸಾಕಾಗಿ ಹೋಗಿದೆ. ಇಲ್ಲಿ ಬದುಕುವುದೇ ಕಷ್ಟವಾಗಿದೆ. ಗಲೀಜಿನಿಂದ ನಾವು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ದೇಶ ಹಾಗೂ ರಾಜ್ಯದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ಪಟ್ಟಣಕ್ಕೆ ಅತ್ಯಂತ ಸನಿಹದಲ್ಲಿರುವ ಹಲಕರ್ಣಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದು ದುಃಖದ ವಿಷಯವಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಒಂದು ಅರ್ಧ ತಾಸು ಆದರೂ ನಮ್ಮ ಗ್ರಾಮದಲ್ಲಿ ಸುತ್ತಾಡಲಿ ಎಂಬುದು ನಮ್ಮ ಆಗ್ರಹ ಎಂದು ನಾಗರಿಕರಾದ ದಿವ್ಯಾ ಹಲಕರ್ಣಿ ಹೇಳಿದ್ದಾರೆ.
ನಾನು, ಶಾಸಕರು ಹಾಗೂ ನಗರ ಪಂಚಾಯಿತಿಯ ಮುಖ್ಯಾಧಿಕಾರಿಗಳು ಸೇರಿಕೊಂಡು 8 ದಿನದ ಹಿಂದೆ ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ. ನಗರ ಪಂಚಾಯಿತಿಯವರು ಜಾಗ ಕೊಡುವಂತೆ ಮನವಿ ಮಾಡಲಾಗಿದೆ. ಈ ಸಮಸ್ಯೆ ತುಂಬಾ ದಿನದಿಂದ ಇರುವುದು ಸತ್ಯವಾಗಿದೆ. ಆದರೆ ನಮಗೆ ಜಾಗ ಲಭ್ಯವಾಗುತ್ತಿಲ್ಲ ಎಂಬುದು ಕೂಡ ನಿಜ ಎಂದು ಇಒ ರಮೇಶ ಮೇತ್ರಿ ಮಾಹಿತಿ ನೀಡಿದ್ದಾರೆ.
ನಾನು, ಇಒ ಹಾಗೂ ಶಾಸಕರೊಂದಿಗೆ ಸಭೆ ಮಾಡಿದ್ದು ನಿಜ. ಈ ಕಸದ ಏರಿಯಾ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ಗ್ರಾಮ ಪಂಚಾಯಿತಿಯವರ ಜವಾಬ್ದಾರಿ. ಇದರೆ ಇಲ್ಲಿನ ಪಿಡಿಒ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ನಮಗಿಂತ ಹೆಚ್ಚು ತಾಲೂಕಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗಗಳು ಹೆಚ್ಚಾಗಿವೆ ಎಂದು ಮುಖ್ಯಾಧಿಕಾರಿ ರಮೇಶ ಕುರಬೇಟ ತಿಳಿಸಿದ್ದಾರೆ.
ಈ ಕಸದ ವಿಷಯದ ಬಗ್ಗೆ ನಾವು ವಕೀಲ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಮೂಲಕ ಅನೇಕ ಹೋರಾಟ ಮಾಡಿದ್ದೇವೆ. ನ್ಯಾಯಾಧೀಶರು ಕೂಡ ಕಸದ ಸಮಸ್ಯೆಯ ಬಗ್ಗೆ ಒಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಕೆ.ಎಲ್. ಇ ಕಾಲೇಜು, ಕೋರ್ಟು, ಬಸ್ ನಿಲ್ದಾಣ ಹಾಗೂ ವಸತಿ ಬಡಾವಣೆಗಳಿವೆ. ಇಲ್ಲಿನ ಕೆಟ್ಟ ಪರಿಸರದಿಂದ ಮಕ್ಕಳು, ವೃದ್ಧರಿಗೆ ಕಾಯಿಲೆಗಳು ಬರುತ್ತಿವೆ. ಬಹುಶಃ ದೇಶದಲ್ಲೇ ಇಷ್ಟೊಂದು ಗಲೀಜಾಗಿ ಗ್ರಾಮವನ್ನು ಇಟ್ಟಿರುವ ಗ್ರಾಪಂ ಇದೊಂದೇ ಇರಬಹುದು ಅನಿಸುತ್ತದೆ. ಈ ಪಿಡಿಒ ಅವರು ವರ್ಲ್ಡ್ ಫೇಮಸ್ ಆಗಿದ್ದಾರೆ. ಇವರ ಮೇಲೆ ಯಾರ ಅಭಯ ಹಸ್ತವಿದೆ ಗೊತ್ತಿಲ್ಲ. ತಕ್ಷಣ ಜಿಪಂ ಸಿಇಒ ಅವರು ಖುದ್ದಾಗಿ ಇಲ್ಲಿಗೆ ಬಂದು ಸಮಸ್ಯೆ ಬಗೆಹರಿಸಬೇಕಿದೆ ಎಂದು ಬಾರ್ ಅಸೋಸಿಯೇಶನ್ ತಾಲೂಕು ಅಧ್ಯಕ್ಷರು, ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಈಶ್ವರ ಘಾಡಿ ಹೇಳಿದ್ದಾರೆ.














