ಆರ್ಟ್ ಮೇನಿಯಾಕ್ ನಿಂದ ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ

WhatsApp
Telegram
Facebook
Twitter
LinkedIn

ಬೆಂಗಳೂರು: ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಹಾಗೂ ಮಲ್ಟಿಮೀಡಿಯಾ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪ್ರಸಿದ್ಧ ಕಲಾವಿದರ ಒಕ್ಕೂಟಗಳಾದ ಆರ್ಟ್ ಮೇನಿಯಾಕ್ ಮತ್ತು 22 ಆರ್ಟ್ ಸ್ಟ್ರೀಟ್ ಶಿಲ್ಪಿ ಪರಿವಾರ್ ಜಂಟಿಯಾಗಿ ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಗರದ ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿವೆ.

ಅರೂಪ್ ಡೇ ಮತ್ತು ಎಸ್. ಕೆ. ಶಫೀಕ್ ಅವರ ಸಂಯೋಜನೆಯಲ್ಲಿ ನಡೆಯುತ್ತಿರುವ ಕಲಾ ಪ್ರದರ್ಶನವು ಕಲಾಭಿಮಾನಿಗಳಿಗೆ ವೈವಿಧ್ಯಮಯ ಅನುಭವವನ್ನು ನೀಡುತ್ತಿದೆ. ಈ ಪ್ರದರ್ಶನವನ್ನು ನವದೆಹಲಿಯ ಲಲಿತ ಕಲಾ ಅಕಾಡೆಮಿಯ ಮಾಜಿ ಆಡಳಿತಾಧಿಕಾರಿ ಹಾಗೂ ಅಧ್ಯಕ್ಷ  ಕೃಷ್ಣ ಸೆಟ್ಟಿ ಸಿ.ಎಸ್ ಅವರು ಉದ್ಘಾಟಿಸಿದ್ದು, ಆಗಸ್ಟ್ 23 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.

ಕೃಷ್ಣ ಸೆಟ್ಟಿ ಸಿ.ಎಸ್ ಅವರು ಮಾತನಾಡಿ, ಪ್ರದರ್ಶನವನ್ನು ಉದ್ಘಾಟಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ. ಈ ಕಲಾ ಬಳಗವು ದೇಶಾದ್ಯಂತ ಹಲವು ನಗರಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದ್ದು, ಬೆಂಗಳೂರು ಅವರ ಪ್ರದರ್ಶನದ ಪ್ರಮುಖ ತಾಣವಾಗಿದೆ. ಪ್ರತಿ ವರ್ಷವೂ ನಗರದಲ್ಲಿ ಪ್ರದರ್ಶನ ನಡೆಸುವ ಈ ತಂಡ, ಪ್ರಖ್ಯಾತ ಹಾಗೂ ಉದಯೋನ್ಮುಖ ಕಲಾವಿದರ ವೈವಿಧ್ಯಮಯ ಕಲಾಕೃತಿಗಳಿಗೆ ವೇದಿಕೆ ಕಲ್ಪಿಸುತ್ತಿದೆ ಎಂದು ಶ್ಲಾಘಿಸಿದರು.

ದೇಶದ ವಿವಿಧ ಭಾಗಗಳಿಂದ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದು, ಸ್ಥಳೀಯ ಬೆಂಗಳೂರಿನ ಕಲಾವಿದರ ಅತ್ಯುತ್ತಮ ಕಲಾಕೃತಿಗಳೂ ಇಲ್ಲಿ ಪ್ರದರ್ಶನಗೊಂಡಿವೆ. ಇಲ್ಲಿ ಪ್ರದರ್ಶಿತಗೊಂಡಿರುವ ಪ್ರತಿಯೊಂದು ಕಲಾಕೃತಿಯೂ ವಿಭಿನ್ನ ವಸ್ತು, ತಾಂತ್ರಿಕತೆ ಮತ್ತು ಕಲಾತ್ಮಕ ಶೈಲಿಯನ್ನು ಒಳಗೊಂಡಿದೆ. ಪ್ರತಿಯೊಂದು ಪ್ರದೇಶದ ಸಾಂಸ್ಕೃತಿಕ ಹಾಗೂ ಕಲಾತ್ಮಕ ಶೈಲಿ ಕಲಾಕೃತಿಗಳಲ್ಲಿ ಎದ್ದು ಕಾಣುವಂತೆ ಚಿತ್ರಿಸಲಾಗಿದೆ ಎಂದು ಹೇಳಿದರು.

ವಿಶೇಷವಾಗಿ ಕಲ್ಕತ್ತಾದಿಂದ ಬಂದಿರುವ ಕಲಾವಿದರ ಅತ್ಯುತ್ತಮ ಕೌಶಲ್ಯ, ಅಲಂಕಾರಿಕ ಶೈಲಿ ಹಾಗೂ ಬಣ್ಣಗಳ ಸಂಯೋಜನೆ ಪ್ರೇಕ್ಷಕರನ್ನು ಆಕರ್ಷಿಸಲಿದೆ. ಕುಂಚದ ಪ್ರತಿಯೊಂದು ಸ್ಪರ್ಶದಲ್ಲೂ ಅತ್ಯುನ್ನತ ಕೌಶಲ್ಯ ಎದ್ದು ಕಾಣುತ್ತಿದೆ. ಮಾಡರ್ನ್ ಆರ್ಟ್, ಸಾಂಪ್ರದಾಯಿಕ ಕಲೆ ಹಾಗೂ ವಿವಿಧ ವಿಭಿನ್ನ ಕಲಾಕೃತಿಗಳು ಒಂದೇ ಕಡೆ ಲಭ್ಯವಿರುವುದರಿಂದ ಪ್ರತಿಯೊಬ್ಬ ಕಲಾಪ್ರೇಮಿಯೂ ಈ ಪ್ರದರ್ಶನವನ್ನು ಆನಂದಿಸಬಹುದಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆಯೋಜಕರಾದ ಎಸ್. ಕೆ. ಶಫೀಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಾವು ಪ್ರತಿವರ್ಷವೂ ಇಂತಹ ಪ್ರದರ್ಶನಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಶಿಲ್ಪ ಪರಿವಾರದ ಮೂಲಕ ಬೆಂಗಳೂರು, ದೆಹಲಿ, ಗೋವಾ, ಮುಂಬೈ ಹಾಗೂ ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಲಾ ಪ್ರದರ್ಶನ ನಡೆಸಿದ್ದೇವೆ. ಇಲ್ಲಿನ ಕಲಾ ಪ್ರದರ್ಶನಕ್ಕೂ ಕಲಾಪ್ರೇಮಿಗಳು ಆಗಮಿಸಿ, ಪ್ರದರ್ಶನವನ್ನು ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon