ಬೆಂಗಳೂರು: ಸಣ್ಣ ರೈತ ಕುಟುಂಬದಲ್ಲಿ ಜನಿಸಿ, ಸರಳ ಸಜ್ಜನಿಕೆಯ ಜೀವನ ನಡೆಸುತ್ತಾ ಪರಿಶ್ರಮ ಮತ್ತು ಹಠದಿಂದ ಬಿ.ಕೆ.ಶ್ರೀನಿವಾಸ್ ಬೆಳೆದಿದ್ದಾರೆ ಎಂದು ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿರುವ ಬೆಂಕೋಶ್ರೀ ಅವರ ಸಿನೆಮಾ, ವ್ಯಾಪಾರ, ಹೋರಾಟ ಮತ್ತು ಅಜೇಯ ಮನೋಬಲದ ಯಶೋಗಾಥೆಯನ್ನೊಳಗೊಂಡ ಕಾಫಿ ಟೇಬಲ್ ಪುಸ್ತಕದ ಲೋಕಾರ್ಪಣೆ ಸಮಾರಂಭ ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆಯಿತು. ಕೃತಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಅವರು, ಹಠವಿದ್ದರೆ ಪಟ್ಟ, ಚಟವಿದ್ದರೆ ಚಟ್ಟ ಎಂಬ ಮಾತಿನ ಅರ್ಥವನ್ನು ಬಿ.ಕೆ.ಶ್ರೀನಿವಾಸ್ ಜೀವನವೇ ತೋರಿಸುತ್ತದೆ ಎಂದರು.
ಪುಸ್ತಕದ ಕುರಿತು ಮಾತನಾಡಿದ ಲೇಖಕ, ಪತ್ರಕರ್ತರಾದ ಜೋಗಿ, ಸಾಮಾನ್ಯವಾಗಿ ನಾವು ಸಿನಿಮಾ ನೋಡಿ ಬರುತ್ತೇವೆ. ಆದರೆ ಅದರ ಹಿಂದೆ ಇರುವ ಪರಿಶ್ರಮ, ಹೂಡಿಕೆ ಮತ್ತು ಜೀವನಾನುಭವಗಳ ಕಥೆ ನಮಗೆ ತಿಳಿಯುವುದಿಲ್ಲ. ಆದರೆ ಆ ಅನುಭವಗಳು ಈ ಕೃತಿಯ ಓದಿನ ಮೂಲಕ ನಮಗೆ ಸಿಗುತ್ತವೆ. ಬೆಂಕೋಶ್ರೀ ತಮ್ಮ ಜೀವನದ ಕಥೆಯನ್ನು ಅತ್ಯಂತ ಆಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಜೀವನಕ್ಕೆ ರೋಟಿ, ಕಪಡಾ, ಮಕಾನ್ ಅಗತ್ಯ. ಆದರೆ ಕೆಲವರಿಗೆ ಅದರ ಜೊತೆಗೆ ಸಿನಿಮಾ ಕೂಡ ಬದುಕಿನ ಫ್ಯಾಶನ್ ಆಗಿರುತ್ತದೆ. ಅದೇ ಇವರ ಬದುಕಿನಲ್ಲಿ ಸಿನಿಮಾ ಒಂದು ಪ್ಯಾಷನ್ ಆಗಿತ್ತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ, ಕನ್ನಡ ಪರ ಹೋರಾಟಗಾರ ಸಾ.ರಾ. ಗೋವಿಂದು ಅವರು, ತಾವು ನಡೆದು ಬಂದ ಹಾದಿಯಲ್ಲಿ ಕೈಹಿಡಿದ ಪ್ರತಿಯೊಬ್ಬರನ್ನು ಬೆಂಕೋಶ್ರೀ ಅವರು ನೆನಪಿಸಿಕೊಳ್ಳುವ ಗುಣ ಹೊಂದಿದ್ದಾರೆ. ಅದೇ ರೀತಿ ಅವರು ಛಲವಾದಿ, ಅಂದುಕೊಂಡ ಕೆಲಸ ಮಾಡಿಯೇ ಮಾಡುತ್ತಾರೆ ಎಂದರು.
ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಮಾತನಾಡಿ, ನಮ್ಮೆಲ್ಲರಿಗೂ ಬೆಂಕೋಶ್ರೀ ಅವರು ಸ್ಪೂರ್ತಿ. ಓದಲು ಬಾರದ ವ್ಯಕ್ತಿ, ತಮ್ಮ ಜೀವನ ಗಾಥೆಯನ್ನು ನಾವೆಲ್ಲ ಓದುವಂತೆ ಮಾಡಿದ್ದಾರೆ. ಅವರ ಸಾಧನೆ ಬಹಳ ದೊಡ್ಡದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಪ್ರಕಾಶನಾಥ ಸ್ವಾಮೀಜಿ, ಸಂಗಮೇಶ್ ಉಪಾಸೆ, ಬಿ.ವಿ. ದ್ವಾರಕನಾಥ್, ಸುರೇಶ್ ಕುಮಾರ್ ಹಾಗೂ ಮಹೇಶ್ ಎಚ್ ಉಪಸ್ಥಿತರಿದ್ದರು.














