ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಿ: ಪರಿಶಿಷ್ಟ ಸಮುದಾಯಗಳ ಆಗ್ರಹ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಡಾ.ಹೆಚ್.ಸಿ ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಅತ್ಯುತ್ತಮ ಜನ ಸಂಘಟಕರಾದ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಮೂಲಕ ಪರಿಶಿಷ್ಟ ಸಮುದಾಯಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಶೋಷಿತರ ಸ್ವಾಭಿಮಾನದ ಹೋರಾಟ ಎಂಬ ಹೆಸರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಟನೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಶಾಸಕ ಎಚ್.ಸಿ.ಮಹದೇವಪ್ಪ ಅವರ ಭಾವಚಿತ್ರ ಪ್ರದರ್ಶಿಸಿ, ನಮ್ಮ ನಾಯಕನಿಗೆ ಸಿಎಂ ಹುದ್ದೆ ನೀಡುವಂತೆ ಒತ್ತಾಯಿಸಲಾಯಿತು.

ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಿರಿಯ ದಲಿತ ನಾಯಕರ ಕೊರತೆ ಇಂದು ರಾಜ್ಯ ರಾಜಕಾರಣದಲ್ಲಿ ಎದ್ದು ಕಾಣುತ್ತಿದೆ. ದಶಕಗಳಿಂದ ಕಾಂಗ್ರೆಸ್ ಗೆ ಮತ ಹಾಕುತ್ತಾ ಬಂದಿರುವ ದಲಿತ ಸಮುದಾಯಕ್ಕೆ ವಂಚನೆ ಮಾಡಲಾಗುತ್ತಿದೆ. ಉನ್ನತ ಹುದ್ದೆಗಳ ಆಮಿಷ ಒಡ್ಡಿ ಪ್ರಭಾವಿ ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಸಿ.ಸಿದ್ದಲಿಂಗಯ್ಯ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ದಲಿತ ಸಮುದಾಯದ ಪ್ರಭಾವಿ ಮತ್ತು ಹಿರಿಯ ನಾಯಕರನ್ನು ಮೂಲೆಗುಂಪು ಮಾಡುವ ಮೂಲಕ ದಲಿತ ನಾಯಕತ್ವವನ್ನೇ ನಾಶ ಮಾಡಲು ಕೆಲವರು ಸಂಚು ರೂಪಿಸಿದ್ದಾರೆ. ಶತಮಾನಗಳಿಂದಲೂ ತಳ ಸಮುದಾಯಗಳ ಪರವಾಗಿ ಧ್ವನಿ ಎತ್ತುತ್ತಾ ಬಂದಿರುವ ನಾಯಕರ ರೆಕ್ಕೆ, ಪುಕ್ಕ ಕತ್ತರಿಸುವ ಕೆಲಸ ನಡೆಯುತ್ತಿದೆ. ಇದು ದಲಿತರ ರಾಜಕೀಯ ಪ್ರಾತಿನಿಧ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಪ್ರಜಾಪ್ರಭುತ್ವದ ಆಶಯಗಳ ಅನ್ವಯ ಡಿಕೆಶಿ ಸರ್ಕಾರದಲ್ಲಿ ನಮ್ಮ ಸಮುದಾಯದ ನಾಯಕರಿಗೆ ಸೂಕ್ತ ಸ್ಥಾನ ಮಾನ ಸಿಗಬೇಕು ಎಂದು ಹೇಳಿದರು.

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಹಳೆ ಮೈಸೂರು ಸೇರಿ ರಾಜ್ಯಾದ್ಯಂತ ದಲಿತ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಹಿರಿಯ ಶಾಸಕ ಎಚ್.ಸಿ.ಮಹದೇವಪ್ಪನವರಿಗೆ ಸಿಎಂ ಸ್ಥಾನ ನೀಡಬೇಕು. ಇದು ಕಾಂಗ್ರೆಸ್ ಹೈಕಮಾಂಡ್ ಗೆ ನಮ್ಮ ಒತ್ತಾಯವಾಗಿದೆ. ಸಮುದಾಯದ ನಾಯಕತ್ವ ನಾಶವಾದರೆ ಇಡೀ ಸಮುದಾಯವೇ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ 10 ಲಕ್ಷ ಜನರನ್ನು ಸೇರಿಸಿ ಇದೇ ಫ್ರೀಡಂ ಪಾರ್ಕ್ ನಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆರ್. ಪಿ.ಐ(ಬಿ) ರಾಷ್ಟ್ರೀಯ ಅಧ್ಯಕ್ಷ ಡಾ.ಎನ್.ಮೂರ್ತಿ ಮಾತನಾಡಿ, ಈ ಹಿಂದೆ ದಿ. ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಬಿ.ರಾಚಯ್ಯ, ಎನ್. ರಾಚಯ್ಯ, ಶ್ರೀನಿವಾಸ್ ಪ್ರಸಾದ್ ಮತ್ತು ಟಿ.ಎ. ನರಸಿಂಹಮೂರ್ತಿ ಅವರಂತಹ ಹತ್ತಾರು ಪ್ರಭಾವಿ ಮುಖಂಡರಿಗೆ ಅನ್ಯಾಯ ಮಾಡಲಾಗಿತ್ತು. ಈಗಿನ ಕಾಲದಲ್ಲೂ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ ಹಾಗೂ ಕೆ.ಎಚ್. ಮುನಿಯಪ್ಪ ಅವರಂತಹ ಹಿರಿಯ ನಾಯಕರನ್ನು ಸಿಎಂ ಹುದ್ದೆಗೆ ಪರಿಗಣಿಸದೆ ಕಾಂಗ್ರೆಸ್, ಸತತವಾಗಿ ದಲಿತ ವಿರೋಧಿ ಧೋರಣೆ ಮುಂದುವರೆಸಿದೆ. ನಮಗೆ ಮಂತ್ರಿ ಸ್ಥಾನ ಬೇಡ. ಸಿಎಂ ಸ್ಥಾನ ಬೇಕು. ದಲಿತರಿಗೆ ಪ್ರಾತಿನಿಧ್ಯ ಸಿಗದಿದ್ದರೆ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಆದಿಜಾಂಬವ ಸಂಘದ ಕಾರ್ಯಾಧ್ಯಕ್ಷ ಜಂಬೂದೀಪ ಸಿದ್ದರಾಜು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರುಷತ್ತೋಮ್, ದಲಿತ ಸಂಘರ್ಷ ಸಮಿತಿಯ ಡಾ.ಡಿ.ಜಿ.ಸಾಗರ್, ಕಲ್ಯಾಣಸಿರಿ ಬಂತೇಜಿ, ಅಣ್ಣಯ್ಯ, ಪುರುಷೋತ್ತಮ್, ಹಾಸನ ಸೋಮು, ಸಿದ್ಧರಾಮ ಶಿವಯೋಗಿ ಸ್ವಾಮೀಜಿ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 

 

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon