ಬೆಂಗಳೂರು: ಮಕ್ಕಳು ಪ್ರತಿಭಾವಂತರು ಅವರಿಗೆ ಅವಕಾಶ ಕಲ್ಪಿಸಬೇಕು. ಅವರುಗಳು ಬೆಳೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಮಾಜಿ ಸಚಿವ ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
ಭಾನುವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಆರ್.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಶಾಲಾ ಮತ್ತು ಕಾಲೇಜು ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ರ್ಯಾಂಕ್ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.
ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರು ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 400ಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ನಗದು ಪುರಸ್ಕಾರ, ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ಮತ್ತು ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಸಹಕಾರ ನೀಡಲಾಗುತ್ತಿದೆ ಎಂದರು.
ವ್ಯಕ್ತಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಮಕ್ಕಳಿಗೆ ಅವಕಾಶ ಸಿಗಬೇಕು. ಶಿಕ್ಷಣದ ಜೊತೆಯಲ್ಲಿ ಅವರ ಕಲೆ, ಸಾಹಿತ್ಯ, ವಿವಿಧ ಕಲಾ ಪ್ರತಿಭೆಗಳು ಇರುತ್ತಾರೆ ಅದಕ್ಕೆ ಪೋತ್ಸಾಹ ನೀಡಬೇಕು. ಅವರಿಗೆ ಅವಕಾಶ ಸಿಗದೇ ಹೋದರೆ ಅವಕಾಶಗಳಿಗೆ ವಂಚಿತರಾಗಿ ಖಿನ್ನತೆಗೆ ಒಳಗಾಗುತ್ತಾರೆ ಹಾಗೆ ಆಗಬಾರದು ಎಂದು ಅವಕಾಶ ಕಲ್ಪಿಸುವ ಕಾರ್ಯ ನಮ್ಮ ಫೌಂಡೇಷನ್ ಮಾಡುತ್ತಿದೆ ಎಂದು ಹೇಳಿದರು.
ನಮ್ಮಲ್ಲಿ ವಿವಿಧ ಸಂಸ್ಕೃತಿ, ಜಾತಿ, ಧರ್ಮವಿದೆ ಎಲ್ಲರು ಸಹೋದರತ್ವದಂತೆ ಬಾಳಬೇಕು. ಮನುಷ್ಯತ್ವ ಬೆಳಸಿಕೊಳ್ಳಬೇಕು. ಎಲ್ಲರು ಒಂದೇ ಎಂಬ ಭಾವನೆ ಬೆಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರ್.ಗುಂಡೂರಾವ್ ಫೌಂಡೇಷನ್ ಸಾಮಾಜಿಕ ಕಾರ್ಯಗಳನ್ನು ಸತತವಾಗಿ ಮಾಡಿಕೊಂಡು ಬರುತ್ತಿದೆ. ಮಕ್ಕಳು ಬೆಳೆಯಬೇಕು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಹೇಳಿದರು.
ವಿಶೇಷವಾಗಿ ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 625ಕ್ಕೆ 625 ಪಡೆದ ಧನುಷ್ ಎನ್ನುವ ಯುವಕನಿಗೆ ಕಾರ್ಯಕ್ರಮದಲ್ಲಿ 25 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಲವು ಸಾಂಸ್ಕೃತಿಕ ಕಲೆಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಬಿಎಂಪಿ ಸಮಿತಿಯ ಸದಸ್ಯರಾದ ಉಮೇಶ್ ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.














