ಹೈ ಗ್ರೌಂಡ್ಸ್ ಅಗ್ನಿ ಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ. ನಾಗರಾಜು ವಯೋನಿವೃತ್ತಿ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಡಿಯ ಹೈ ಗ್ರೌಂಡ್ಸ್ ಅಗ್ನಿ ಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳಾದ ಕೆ ನಾಗರಾಜು ಅವರು ಶನಿವಾರ ವಯೋನಿರ್ವೃತ್ತಿಯನ್ನು ಹೊಂದಿದ್ದು, ಅಪಾರ ಸಂಖ್ಯೆಯ ಬಂಧು ಬಾಂಧವರು, ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಅವರಿಗೆ ಶುಭ ಹಾರೈಸಿ ವಿಜೃಂಭಣೆಯ ಬೀಳ್ಕೊಡುಗೆ ಸಮಾರಂಭವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಕೆ ನಾಗರಾಜು ರವರು, ಅಗ್ನಿ ಶಾಮಕ ಇಲಾಖೆಯ ಕೆಲಸ ಅತ್ಯಂತ ಕಷ್ಟಕರವಾದದ್ದು, ಬೆಂಕಿ ಅನಾಹುತದ ಸಮಯದಲ್ಲಿ ಪ್ರಾಣದ ಹಂಗನ್ನು ತೊರೆದು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾರೆ. ಬೇರೆ ಕೆಲಸಗಳಿಗೆ ಹೋಲಿಸಿದರೆ ತುರ್ತು ಸಂದರ್ಭದಲ್ಲಿ ನಮ್ಮ ಇಲಾಖೆಯ ಕೆಲಸ ಅತ್ಯಂತ ಕಷ್ಟಕರವಾದದ್ದು. ಆದರೆ ಸಮಾಧಾನಕರ ಸಂಗತಿಯಾಗಿ ಹಂತ ಹಂತವಾಗಿ ನಮ್ಮ ಕೆಲಸಕ್ಕೆ ಸಿಗಬೇಕಾದ ಮಹತ್ವ ಮತ್ತು ಅದಕ್ಕೆ ಪೂರಕವಾದ ವ್ಯವಸ್ಥೆ ಪೂರೈಸಲಾಗುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

89ನೇ ಇಸವಿಯಲ್ಲಿ ಅಗ್ನಿ ಶಾಮಕ ಸಿಬ್ಬಂದಿಯಾಗಿ ನನ್ನ ಕೆಲಸವನ್ನು ನಾನು ಪ್ರಾರಂಭಿಸಿದೆ. ಈಗ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ನಿವೃತ್ತಿಯನ್ನು ಹೊಂದುತ್ತಿದ್ದೇನೆ. ನನ್ನ ಸೇವೆಯ ಅತ್ಯಂತ ಕ್ಲಿಷ್ಟಕರ ಸನ್ನಿವೇಶ 2006 ರ ಹಿಮಾಲಯ ಡ್ರಗ್ ಹೌಸ್ ಅಗ್ನಿ ಅನಾಹುತ ಪ್ರಕರಣವಾಗಿದೆ. ಅಲ್ಲಿ ಅತ್ಯಂತ ಮಾರಕ ರಾಸಾಯನಿಕ ಸೋರಿಕೆಯಾಗಿ ಅದರ ಜೊತೆ ಜೊತೆಗೆ ಅಗ್ನಿ ಅವಘಡ ಕೂಡ ಸಂಭವಿಸಿತ್ತು. ಆದರೆ ಆ ಸಮಯದ ಸಮಯೋಚಿತ ನಿರ್ಧಾರಗಳು ನನ್ನ ಮತ್ತು ಸಿಬ್ಬಂದಿಗಳ ಕಾರ್ಯತತ್ಪರತೆ ಸ್ಮರಣೀಯವಾಗಿದೆ ಎಂದು ತಮ್ಮ ಸೇವಾವಧಿಯ ಮಹತ್ತರ ಘಟ್ಟವನ್ನು ಮೆಲಕು ಹಾಕಿದರು.

ತರಬೇತಿಯ ವಿಧಾನ ಈಗ ಸಾಕಷ್ಟು ಬದಲಾಗಿದ್ದು, ನೈಪುಣ್ಯತೆ ಹಾಗೂ ತಾಂತ್ರಿಕತೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ನಾಗಪುರದ ಉತ್ಕೃಷ್ಟ ತರಬೇತಿ ಕೇಂದ್ರದಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತರಬೇತಿ ಹೊಂದುತ್ತಿದ್ದಾರೆ. 6 ತಿಂಗಳ ಕಠಿಣ ತರಬೇತಿಯನ್ನು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ. ಈಗಾಗಲೇ ನೇಮಕವಾಗಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಹ ನಿಗಧಿತ ಅವಧಿಯಲ್ಲಿ ತರಬೇತಿಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಇಷ್ಟು ವರ್ಷದ ಸೇವಾವಧಿ ನನಗೆ ತೃಪ್ತಿ ತಂದಿದೆ. ನಮಗೆ ನೀಡಿದ ಹುದ್ದೆಯನ್ನು ಹಾಗೂ ಕೆಲಸವನ್ನು ತಾಯಿಯ ಸೇವೆಯೆಂದು ಪರಿಗಣಿಸಿ ಕಾರ್ಯನಿರ್ವಹಿಸಿದ್ದೇನೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಅವರ ಉತ್ತೇಜನ ನನಗೆ ಸಾಕಷ್ಟು ದೊರೆತಿದ್ದು, ಅದರಿಂದ ಇನ್ನೂ ಹೆಚ್ಚು ಕೆಲಸ ನಿರ್ವಹಿಸಲು ಪ್ರೇರಣೆ ಸಿಕ್ಕಿದೆ. ಹಿಂದಿನ ಡಿಜಿಪಿಯಾದ ಕಮಲ್ ಪಂತ್ ಮತ್ತು ಈಗಿನ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಠಾಕೂರ್ ಸಾಕಷ್ಟು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಒತ್ತು ನೀಡಿ, ಸಿಬ್ಬಂದಿಗಳಿಗೆ ಕೆಲಸಕ್ಕೆ ಪೂರಕವಾದ ವಾತಾವರಣ ನಿರ್ಮಿಸಿರುವುದು ಸಂತಸ ತಂದಿದೆ ಎಂದು ಭಾವುಕ ನುಡಿಗಳನ್ನು ಕೆ ನಾಗರಾಜು ವ್ಯಕ್ತಪಡಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon