ಬೆಂಗಳೂರು: ದಕ್ಷಿಣ ತಾಲೂಕಿನ ಗುಳಕಮಲೆ ಗ್ರಾಮದ ಸರ್ವೆ ನಂಬರ್ 35 ರಲ್ಲಿದ್ದ ಸರ್ಕಾರಿ ಗೋಮಾಳಕ್ಕೆ ನಕಲಿ ದಾಖಲೆ ಸೃಷ್ಟಿ ಮಾಡಿ ರಿಜಿಸ್ಟರ್ ಮಾಡಿಸಿಕೊಂಡು ಕೋಟ್ಯಾಂತರ ರೂಪಾಯಿ ಭೂ ಹಗರಣ ನೆಡೆಸಲಾಗಿದೆ ಎಂದು ಡಾ ಬಿ. ಆರ್ ಅಂಬೇಡ್ಕರ್ ಯುವಕ ಮಂಡಳಿಯ ಅಧ್ಯಕ್ಷ ಕೆ. ಟಿ ಮುನಿಯಪ್ಪ ಆರೋಪಿಸಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಗೋಮಾಳಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡವರಿಗೆ ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಗಳ ಕೃಪಾ ಕಟಾಕ್ಷ ಇದೆಯೆಂಬ ಗುಮಾನಿಗಳಿವೆ. ರಾಜ್ಯದಲ್ಲಿ ಜಮೀನುಗಳ ಪರಭಾರೆ ನಿಲ್ಲಿಸಿದ್ದ ಸಂಧರ್ಭದಲ್ಲಿ ಗೋಮಾಳದ ಜಮೀನು ಡೆವೆಲಪರ್ ಗಳ ಹೆಸರಿಗೆ ರಿಜಿಸ್ಟರ್ ಆಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಹೇಳಿದರು.
ಬೆಂಗಳೂರು ಈಗ ರಿಯಲ್ ಎಸ್ಟೇಟ್ ಸಿಟಿಯಾಗಿ ಕನ್ವರ್ಟ್ ಆಗಿರುವುದರಿಂದ ದಿನದಿಂದ ದಿನಕ್ಕೆ ಭೂಮಿ ಬೆಲೆ ಗಗನಕ್ಕೆ ಜಿಗಿಯುತ್ತಲೇ ಇದೆ. ರಿಂಗ್ ರೋಡ್, ಪೆರಿಫೆರಲ್ ರೋಡ್, ಬಿಸಿನೆಸ್ ಕಾರಿಡಾರ್, ಎರಡೆರಡು ಏರ್ ಪೋರ್ಟ್, ಉಪನಗರಗಳು ಇಂಡಸ್ಟ್ರಿಯಲ್ ಟೌನ್ ಶಿಪ್ ಗಳ ಘೋಷಣೆ ಯಾಗುತ್ತಿದ್ದಂತೆ ಇತ್ತೀಚೆಗೆ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಿಗೆ ಬೇಲಿ ಸುತ್ತಿ ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿಗೆ ಮಾರಿಕೊಳ್ಳುವ ಗೋಲ್ ಮಾಲ್ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ದೂಷಿಸಿದರು.
ಗೋಲ್ ಮಾಲ್ ಗಳಲ್ಲಿ ಸರಕಾರಿ ಅಧಿಕಾರಿಗಳು, ರಾಜಕೀಯ ನಾಯಕರು ಪೊಲೀಸರು ಶಾಮೀಲಾಗುತ್ತಿರುವುದು ದುರಂತವಾಗಿದೆ. ಮಾಧ್ಯಮಗಳಲ್ಲಿ ಭೂಹಗರಣ ಬಯಲಿಗೆ ಬಂದರೂ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದರೂ ಈ ಭೂಗಳ್ಳರ ಕಳ್ಳಾಟ, ಭೂಮಾಫಿಯಾ ನುಂಗಾಟ ನಿಲ್ಲುತ್ತಿಲ್ಲ. ಸಂಘಟನೆಗಳು ಬೀದಿ ಹೋರಾಟಕ್ಕೆ ಅಣಿಯಾದರೂ ಬೆದರದೆ ಭೂ ಹಗರಣಗಳು ಸದ್ದುಮಾಡುತ್ತಲೇ ಇವೆ. ಗೋಮಾಳ ನುಂಗಿರುವುದು ಕೂಡ ಅಂತಹದೇ ಭೂ ಹಗರಣವಾಗಿದೆ ಎಂದು ಕಿಡಿಕಾರಿದರು.
ಸರ್ವೆ ನಂಬರ್ 35 ರಲ್ಲಿ ಒಂದೇ ಕುಟುಂಬಕ್ಕೆ ಅನಾಮತ್ತಾಗಿ 10 ಎಕರೆ ಮತ್ತು 7 ಎಕರೆ ಭೂಮಿಯನ್ನು ಹಳೇ ಕೈ ಬರಹದ ಪಾಣಿಯಲ್ಲಿರುವಂತೆ ನಕಲಿ ದಾಖಲೆ ತೋರಿಸಿಕೊಂಡು ಅದಕ್ಕೆ ಬೇಕಾದ ಇನ್ನಿತರ ನಕಲಿ ಫೋರ್ಜರಿ ಪತ್ರಗಳನ್ನು ರೆಡಿ ಮಾಡಿ ಪೋಡಿ ದುರಸ್ತಿ, ಸರ್ವೇ ಸ್ಕೆಚ್, ಸಾಗುವಳಿ ಚೀಟಿ ಇಲ್ಲದಿದ್ದರೂ ಜಯನಗರ ವ್ಯಾಪ್ತಿಯ ಉಪ ನೋಂದಣಿ ಅಧಿಕಾರಿಗಳ ಸಬ್ ರಿಜಿಸ್ಟರ್ ಕಚೇರಿಯನ್ನು ರಿಜಿಸ್ಟ್ರೇಷನ್ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಡಾ ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲಾ ಅಧಿಕಾರಿಗಳಿಗೆ, ನೋಂದಣಿ ಮಹಾ ಪರಿವೀಕ್ಷಕರಿಗೆ ಮುದ್ರಾಂಕ ಆಯುಕ್ತರಿಗೆ ತಹಶೀಲ್ದಾರ್ ಬೆಂಗಳೂರು ದಕ್ಷಿಣ ರವರಿಗೆ, ಸರ್ವೇ ಹೆಡ್ ಆಫೀಸಿಗೆ, ಮುಖ್ಯಮಂತ್ರಿಗಳ ಸಚಿವಾಲಯದ ಕಛೇರಿಗೆ, ಕಂದಾಯ ಸಚಿವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕೆ. ಟಿ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.














