ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ. ತಿಂಗಳ ಹಿಂದಷ್ಟೇ ಚಿತ್ರೀಕರಣ ಮುಗಿಸಿಕೊಂಡು ಒಂದಷ್ಟು ಸುದ್ದಿ ಮಾಡಿದ್ದ ಈ ಸಿನಿಮಾ, ಟೀಸರ್ ಬಿಡುಗಡೆಯ ಜೊತೆಗೆ ಲವ್ ಸೀಸನ್ಸ್ ಚಿತ್ರತಂಡದ ಆಂತರ್ಯದ ಬಗ್ಗೆ ಒಂದಷ್ಟು ಕುತೂಹಲಕರ ವಿಚಾರಗಳು ಅನಾವರಣಗೊಂಡಿವೆ.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಪಳಗಿ ಕ್ಷತ್ರಿಯ, ಬುದ್ಧಿವಂತ 2, ಗುರುದೇವ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕೃತ್ವಿಕ್ ಲವ್ ಸೀಸನ್ಸ್ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರದ ನಾಯಕ, ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಹಾಗೂ ನಾಯಕಿಯರಾದ ದಿಯಾ ಕೀರ್ತಿ, ಶ್ವೇತಾ ಕೊಗ್ಲೂರು ಮತ್ತು ಚಂದನಾ ಗೌಡ ತಾರಾಗಣದಲ್ಲಿದ್ದಾರೆ. ಸಂಗೀತ ನಿರ್ದೇಶಕರಾಗಿ ವೀರ್ ಸಮರ್ಥ್ ಭಿನ್ನವಾದ ಹಾಡುಗಳನ್ನು ನೀಡಿದ್ದಾರೆ.
ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.
ಟೀಸರ್ ಬಿಡುಗಡೆ ವೇದಿಕೆಯಲ್ಲಿಯೇ ಲವ್ ಸೀಸನ್ಸ್ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಸುಳಿವು ಸಿಕ್ಕಿದೆ. ಇದೀಗ ಮೊದಲನೆಯದ್ದಾಗಿ ಟೀಸರ್ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥಾ ಕಾಲಮಾನ. ಆದರೆ ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ ಲವ್ ಸೀಸನ್ಸ್ ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.
ರಾಜೇಶ್ ನಟರಂಗ ಈ ಚಿತ್ರದ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಬಗ್ಗೆ ಮಾತಾಡಿರುವ ಅವರು, ನಿರ್ದೇಶಕರ ಕಸುಬುದಾರಿಕೆ ಮೆಚ್ಚುವಂತದ್ದು, ನಾನು ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ನಟಿಸಿದ್ದೇನೆ. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರವಾಗಿದೆ. ಈ ಭೂಮಿಕೆಯಲ್ಲಿಯೇ ರೂಪುಗೊಂಡಿರುವ ಈ ಚಿತ್ರವನ್ನು ಬೆಂಬಲಿಸಿ, ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡಿದ್ದಾರೆ.















